ಪ್ರಮುಖ ಸುದ್ದಿ

ಕೋವಿಡ್ ಲಸಿಕೆ ಅಂತಿಮ ಹಂತದ ಪ್ರಯೋಗ : ವಿತರಣೆಗೆ ಭರದ ಸಿದ್ಧತೆ ನಡೆಸಿದ ಕೇಂದ್ರ ಸರ್ಕಾರ

ದೇಶ(ನವದೆಹಲಿ)ಅ.31:- ಕೋವಿಡ್ ಲಸಿಕೆ ಅಂತಿಮ ಪ್ರಯೋಗ ಹಂತದಲ್ಲಿರುವಂತೆಯೇ ಕೇಂದ್ರ ಸರಕಾರ ಅದರ ವಿತರಣೆಗೂ ಭರದ ಸಿದ್ಧತೆ ಮಾಡುತ್ತಿದೆ. ವಿತರಣೆ ಸಂಬಂಧ ಸಮನ್ವಯ ಸಮಿತಿಗಳನ್ನು ರಚಿಸುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ರಾಜ್ಯ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯ ಪರಿಶೀಲನ ಸಮಿತಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಆರೋಗ್ಯ ಇಲಾಖೆ ಕಾರ್ಯದರ್ಶಿಯ ನೇತೃತ್ವದಲ್ಲಿ ರಾಜ್ಯ ಕಾರ್ಯಪಡೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕಾರ್ಯಪಡೆಗಳನ್ನು ರಚಿಸುವಂತೆ ಸೂಚಿಸಿದೆ. ಈ ಸಂಬಂಧ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆಯಲಾಗಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಬೇಕು. ಲಸಿಕೆಯ ಬಗ್ಗೆ ತಪ್ಪು ಸಂದೇಶಗಳು ಹರಡುವುದಕ್ಕೆ ಬಿಡಬಾರದು. ಒಂದು ವೇಳೆ ವದಂತಿಗಳು ಹರಡಿದರೆ ಜನರು ಲಸಿಕೆಯಿಂದ ದೂರ ಉಳಿಯಬಹುದು. ಹಾಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

ಭಾರತದಂತಹ ವಿಶಾಲ ದೇಶದಲ್ಲಿ ಎಲ್ಲರಿಗೂ ಲಸಿಕೆ ಒದಗಿಸುವುದು ಸುಲಭವಲ್ಲವಾದ್ದರಿಂದ ಲಸಿಕೆ ಲಭ್ಯವಾದ ಬಳಿಕ ಎಲ್ಲರಿಗೂ ವಿತರಣೆ ಮಾಡಲು ವರ್ಷವೇ ಹಿಡಿಯಬಹುದು. ಹೀಗಾಗಿ ಇದನ್ನು ಸಮರ್ಪಕವಾಗಿ ನಿರ್ವಹಿಸುವುದಕ್ಕೆ ಸಮನ್ವಯ ಸಮಿತಿಗಳನ್ನು ರಚಿಸಬೇಕು. ವಿತರಣೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಮತ್ತು ಮೇಲುಸ್ತುವಾರಿ ವಹಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಬೇಕು ಎಂದವರು ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: