ಮೈಸೂರು

ಕೊಟ್ಟ ಸಾಲ ಮರಳಿ ಬಾರದ ಹಿನ್ನೆಲೆ ಮನನೊಂದ ಉದ್ಯಮಿ ಆತ್ಮಹತ್ಯೆ

ಮೈಸೂರು,ಅ.31:- ಕೊಟ್ಟ ಸಾಲ ಮರಳಿ ಬಾರದ ಹಿನ್ನೆಲೆಯಲ್ಲಿ ಮನನೊಂದ ಮೈಸೂರು ನಿವಾಸಿ ಉದ್ಯಮಿಯೋರ್ವರು ಕಾರ್ಕಳ-ಉಡುಪಿ ನಡುವೆ ಹೊಸಾಡು ಎಂಬಲ್ಲಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೃತರನ್ನು ಮೈಸೂರಿನ ವಿವಿ ಮೊಹಲ್ಲಾ ನಿವಾಸಿ ಎಂ.ಪಿ.ಮಧು (40)ಎಂದು ಗುರುತಿಸಲಾಗಿದೆ. ಇವರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಪೆಟ್ರೋಲ್ ಬಂಕ್ ಒಂದನ್ನು ಗುತ್ತಿಗೆಗೆ ಪಡೆದು ನಡೆಸುತ್ತಿದ್ದರು. ಇವರು ಹಲವರಿಗೆ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡಿದ್ದರು ಎನ್ನಲಾಗಿದೆ. ಸಾಲ ಪಡೆದವರು ಹಣ ವನ್ನು ಹಿಂದಿರುಗಿಸದೇ ವಂಚಿಸಿದ್ದು, ಇದರಿಂದ ಮಧು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಧರ್ಮಸ್ಥಳಕ್ಕೆ ತೆಳುವುದಾಗಿ ಕಾರಿನಲ್ಲಿ ಹೊರಟ ಅವರು ಕಾರ್ಕಳ-ುಡುಪಿ ನಡುವೆ ಹೊಸಾಡು ಎಂಬಲ್ಲಿ ಅರಾಟೆ ಸೇತುವೆ ಸಮೀಪ ಕಾರು ನಿಲ್ಲಿಸಿ ಸೌಪರ್ಣಿಕಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇತುವೆ ಬಳಿ ಅಪರಿಚಿತ ಕಾರು ನಿಂತಿರುವುದರ ಕುರಿತು ಮಾಹಿತಿ ಪಡೆದ ಗಂಗೊಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕಾರಿನಲ್ಲಿದ್ದ ಮೊಬೈಲ್ ಮೂಲಕ ಕಾರು ಮಾಲಕ ಮಧು ಎಂದು ಗುರುತಿಸಲಾಗಿದೆ. ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆಯಲ್ಲಿ ಹುಡುಕಾಟ ನಡೆಸಿದಾಗ ಸೇನಾಪುರ ಗ್ರಾಮದ ಬಳಿ ಸೌಪರ್ಣಿಕಾ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಪೊಲೀಸರು ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ. ಇವರು ಪತ್ನಿ, ಹಾಗೂ 15ವರ್ಷದ ಪುತ್ರನನ್ನು ಅಗಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: