ಮೈಸೂರು

ಕನ್ನಡ ರಾಜ್ಯೋತ್ಸವ : ಕೊರೋನಾ ವಾರಿಯರ್ಸ್ ಗಳನ್ನು ಸನ್ಮಾನಿಸಿದ ಶಾಸಕ ಜಿ.ಟಿ.ದೇವೇಗೌಡ

ಮೈಸೂರು,ನ.1:- ಭಾಷೆಯ ಆಧಾರದ ಮೇಲೆ ನಮ್ಮದೇ ಆದ ನಾಡನ್ನು ಕಟ್ಟಿಕೊಂಡ ಶುಭ ದಿನವಿಂದು. ನಮ್ಮೆಲ್ಲರನ್ನು ಒಗ್ಗೂಡಿಸಿದ “ಕನ್ನಡ” ಕೇವಲ ಭಾಷೆಯಲ್ಲ, ಇದು ನಮ್ಮ ನಿಲುವು, ನಮ್ಮ ಹೆಗ್ಗುರುತು. ಈ ಶುಭಸಂದರ್ಭದಲ್ಲಿ ಕನ್ನಡ ನಾಡನ್ನು ಕಟ್ಟಲು ಶ್ರಮಿಸಿದ ಎಲ್ಲರನ್ನೂ ನೆನೆಯುತ್ತೇನೆ ಎಂದು ಶಾಸಕ ಜಿ.ಟಿಲ.ದೇವೇಗೌಡ ತಿಳಿಸಿದರು.
ಇಂದು ಚಾಮುಂಡೇಶ್ವರಿ ಕ್ಷೇತ್ರದ ಕಡಕೊಳ ಗ್ರಾಮದಲ್ಲಿ ಕನ್ನಡ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು ಈ ಸಂದರ್ಭದಲ್ಲಿ ನಾವು ಕನ್ನಡ ಹೋರಾಟಗಾರರನ್ನು ಸ್ಮರಿಸಬೇಕು ಎಂದರು.
ನವೆಂಬರ್ ತಿಂಗಳೆಂದರೆ ಕನ್ನಡಿಗರಿಗೆ ವಿಶೇಷವಾದ ತಿಂಗಳು.”ಕನ್ನಡದ ಕುಲಪುರೋಹಿತ” ಎಂದೇ ಹೆಸರಾದ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು 1905ರಲ್ಲಿ ಪ್ರಾರಂಭಿಸಿದರು.ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ 1956ರಲ್ಲಿ ರಾಜ್ಯಗಳನ್ನು ವಿಂಗಡಿಸಿದರು.ಅದರಂತೆ ಮದ್ರಾಸ್, ಮುಂಬಯಿ ಮತ್ತು ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ಹೊಸದಾಗಿ ಏಕೀಕೃತಗೊಂಡ ರಾಜ್ಯವನ್ನು ನವೆಂಬರ್ ೧, 1973 ರಂದು “ಕರ್ನಾಟಕ” ಎಂದು ಬದಲಾಯಿಸಲಾಯಿತು.
ಕನ್ನಡದ ಇತಿಹಾಸ, ಮಹತ್ವ, ಮತ್ತು ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಈ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ನಾವು ಕನ್ನಡ ನಾಡನ್ನು ನಮ್ಮ ಭಾಷೆಯನ್ನು ಸದಾ ಪ್ರೀತಿಸಬೇಕು. ಕನ್ನಡ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯ ಅದರ ಬಳಕೆಯನ್ನು ಮಾಡುತ್ತಾ ಕನ್ನಡವನ್ನು ಪೂಜಿಸಬೇಕು ಎಂದರು.
ಸಮಾರಂಭದಲ್ಲಿ ಕೊರೋನಾ ವಾರಿಯರ್ಸ್‌ಗಳಾದ ಆಶಾಕಾರ್ಯಕರ್ತೆಯಾದ ಮಂಜುಳ, ಸ್ಟಾಫ್ ನರ್ಸ್ ಸ್ವರ್ಣಲತಾ, ಅಂಗನವಾಡಿ ಕಾರ್ಯಕರ್ತೆ ನಾಗರತ್ನ, ಪೊಲೀಸ್ ಪೇದೆ ಆಲೇಶ್, ಪೌರಕಾರ್ಮಿಕರಾದ ವಿನೋದ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮುಖಂಡರಾದ ಗೆಜ್ಜಗಳ್ಳಿ ಲೋಕೇಶ್, ಜವರೇಗೌಡ, ಆದಿರಾಜ, ಶ್ರೀಕಂಠ, ಸಿದ್ದರಾಮೇಗೌಡ, ಕಪನಿಗೌಡ, ಜವರನಾಯಕ,ಕೆ.ಟಿ.ಶಿವಣ್ಣ, ರಂಗಪ್ಪ, ಪುಟ್ಟಮಾದು ಕನ್ನಡ ಗೆಳೆಯರ ಬಳಗದ ಅಧ್ಯಕ್ಷರಾದ ಗೋವಿಂದರಾಜು, ನಟರಾಜು, ಚಂದ್ರ, ಕುಮಾರಸ್ವಾಮಿ, ನಂಜಪ್ಪ ಹಾಗೂ ಬಳಗದ ಎಲ್ಲಾ ಸದಸ್ಯರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: