ಮೈಸೂರು

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಮ್ ಆದ್ಮಿ ಪಾರ್ಟಿ ವತಿಯಿಂದ ವಿನೂತನ ಅಭಿಯಾನ

ಮೈಸೂರು,ನ.3:- ಈ ಬಾರಿಯ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಮ್ ಆದ್ಮಿ ಪಾರ್ಟಿ ಮೈಸೂರು ಜಿಲ್ಲಾ ಘಟಕ ವಿಭಿನ್ನವಾದ ಅಭಿಯಾನವನ್ನು ಹಮ್ಮಿಕೊಂಡಿದೆ.
ಹೊರ ರಾಜ್ಯದಿಂದ ಹೊಟ್ಟೆ ಪಾಡಿಗಾಗಿ ಕರುನಾಡಿಗೆ ಬಂದು ಕಾರ್ಯ ನಿರ್ವಹಿಸುತ್ತಿರುವ ಕನ್ನಡ ಬಾರದ ಬ್ಯಾಂಕ್ ಮತ್ತು ಕೇಂದ್ರ ಸರಕಾರದ ನೌಕರರಿಗೆ ಕನ್ನಡ ಕಲಿಯಲು ಅನುಕೂಲವಾಗುವಂತಹ “ಸುಮ್ಮನೆ ಮಾತಾಡಿ” ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿ ಅವರಿಗೆ ಕನ್ನಡ ಕಲಿಯುವಂತೆ ಪ್ರೋತ್ಸಾಹಿಸಲಾಯಿತು.
ಆಪ್ ಪಕ್ಷದ ಜಿಲ್ಲಾ ಅಧ್ಯಕ್ಷೆಯಾದ ಮಾಲವಿಕ ಗುಬ್ಬಿವಾಣಿಯವರು ಕನ್ನಡಕ್ಕೋಸ್ಕರ ಈ ಬಾರಿ ಏನಾದರೂ ಹೊಸತಾಗಿ ಮಾಡಬೇಕು ಎಂಬ ಹುಮ್ಮಸ್ಸಿನಿಂದ ಈ ಯೋಜನೆ ಕಾರ್ಯರೂಪಕ್ಕೆ ತಂದಿರುತ್ತಾರೆ. ಅಭಿಯಾನದಲ್ಲಿ ವಿಜಯನಗರದ ಸುತ್ತಮುತ್ತಲಿನ ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಶಾಖೆಗಳಿಗೆ ಭೇಟಿ ನೀಡಿ ಪುಸ್ತಕ ಹಂಚಲಾಯಿತು. ಅಭಿಯಾನದಲ್ಲಿ ನಾಸರೀನ್ ತಾಜ್, ರೇಣುಕಾಪ್ರಸಾದ್, ಶಿವಕುಮಾರ್ ಮತ್ತು ರಾಜು ಪಾಲ್ಗೊಂಡಿದ್ದರು.
ರಾಜ್ಯೋತ್ಸವ ದಿನದಂದು ಸಾರ್ವತ್ರಿಕ ರಜೆ ಇದ್ದುದರಿಂದ ಅಭಿಯಾನವನ್ನು ಈ ವಾರ ಪೂರ್ತಿ ರಾಜ್ಯೋತ್ಸವ ವಾರವನ್ನಾಗಿ ಆಚರಿಸುತ್ತಾ, ವಿವಿಧ ಬ್ಯಾಂಕ್ ಮತ್ತು ಕಚೇರಿಗಳಿಗೆ ಭೇಟಿ ನೀಡಿ, ಅಲ್ಲಿರುವ ಕನ್ನಡ ಬಾರದ ಹೊರ ರಾಜ್ಯದ ನೌಕರರಿಗೆ ಪುಸ್ತಕ ಹಂಚಲಾಗುತ್ತಿದೆ. ಈ ಅಭಿಯಾನಕ್ಕೆ ಪ್ರೋತ್ಸಾಹ ನೀಡಲಿಚ್ಛಿಸುವ ವ್ಯಕ್ತಿಗಳು, ಸಂಸ್ಥೆಗಳು ನಮ್ಮೊಂದಿಗೆ ಕೈ ಜೋಡಿಸಬಹುದು ಅಥವಾ ತಾವೂ ಇದನ್ನು ಅಭಿಯಾನವಾಗಿ ಹಮ್ಮಿಕೊಳ್ಳಬಹುದು ಎಂದು ಮಾಲವಿಕ ಗುಬ್ಬಿವಾಣಿ ತಿಳಿಸಿದರು. ಈ ಹಿಂದೆಯೂ ಅವರು ಬ್ಯಾಂಕುಗಳಲ್ಲಿ ಕನ್ನಡ ಬಳಸಿ ಮತ್ತು ಬ್ಯಾಂಕಿಂಗ್ ಪರೀಕ್ಷೆ ಕನ್ನಡದಲ್ಲಿ ನಡೆಸಿ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: