ಕರ್ನಾಟಕಪ್ರಮುಖ ಸುದ್ದಿ

ಎಲ್‍ಆರ್ ಶಿವರಾಮೇಗೌಡ, ಸುರೇಶ್ ಗೌಡ ಜೆಡಿಎಸ್‍ಗೆ : ನಾಗಮಂಗಲದಲ್ಲಿ ಅದಲು ಬದಲು..

ಬೆಂಗಳೂರು: ನಾಗಮಂಗಲ ಕ್ಷೇತ್ರದ ಕಾಂಗ್ರೆಸ್‍ ಮುಖಂಡರಾದ ಎಲ್‍.ಆರ್‍. ಶಿವರಾಮೇಗೌಡ ಮತ್ತು ಮಾಜಿ ಶಾಸಕ ಸುರೇಶ್ ಗೌಡ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗುವುದು ಖಾತ್ರಿಯಾಗಿದೆ.

ಮಾಜಿ ಸಚಿವ ನಾಗಮಂಗಲ ಶಾಸಕ ಎನ್.ಚೆಲುವರಾಯಸ್ವಾಮಿ ಅವರು ಜೆಡಿಎಸ್ ನಾಯಕತ್ವದ ವಿರುದ್ಧ ಬಂಡೆದ್ದು ಕಾಂಗ್ರೆಸ್ ಸೇರುವ ತಯಾರಿಯಲ್ಲಿದ್ದರೆ, ಅದೇ ನಾಗಮಂಗಲ ಕ್ಷೇತ್ರ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ.

ಆಶ್ವರ್ಯವೆಂದರೆ ಕಾಂಗ್ರೆಸ್‍ ಪಕ್ಷದಲ್ಲಿದ್ದಾಗ ಶಿವರಾಮೇಗೌಡ ಮತ್ತು ಸುರೇಶ್ ಗೌಡ ಪರಸ್ಪರ ವಿರೋಧಿ ಬಣದಂತೆ ಕಾರ್ಯನಿರ್ವಹಿಸಿದ್ದರು. ದೇವೇಗೌಡರ ಹಿತವಚನದ ನಂತರ ಈ ಇಬ್ಬರೂ ನಾಯಕರು ಜೆಡಿಎಸ್ ಸೇರಿ ಒಟ್ಟಾಗಿ ಹೋರಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಸೇರ್ಪಡೆ ಸಂಬಂಧ ಈಗಾಗಲೇ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಮಾಜಿ ಶಾಸಕ ಸುರೇಶ್ ಗೌಡ ಮತ್ತು ಮಾಜಿ ಸಚಿವ ಶಿವರಾಮೇಗೌಡ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭ ಮಂಡ್ಯ ಸಂಸದ ಪುಟ್ಟರಾಜು, ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹಾಜರಿದ್ದರು.

ಏಪ್ರಿಲ್ 10 ರ ನಂತರ ಮಾಜಿ ಶಾಸಕ ಸುರೇಶಗೌಡ ಮತ್ತು ಮಾಜಿ ಸಚಿವ ಶಿವರಾಮೇಗೌಡ ಅವರು ಜೆಡಿಎಸ್‌‌ಗೆ ಸೇರ್ಪಡೆಯಾಗಲಿದ್ದಾರೆ. ಈ ಕುರಿತು ದೇವೇಗೌಡರ ಜೊತೆ ಮಾತುಕತೆ ಮಾಡಲಾಗಿದೆ. ದೇವೇಗೌಡರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇಬ್ಬರೂ ನಾಯಕರು ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಸೇರ್ಪಡೆಯಾಗಲು ಸಮ್ಮತಿಸಿದ್ದಾರೆ. ಭೇಟಿ ವೇಳೆ ಟಿಕೆಟ್ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಮೂಲಗಳು ತಿಳಿಸಿವೆ.

ಎಸ್‍.ಎಂ.ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ತುಸು ಸೊರಗಿದ್ದ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕವು ಇದೀಗ ನಾಗಮಂಗಲದ ಇಬ್ಬರು ಪ್ರಮುಖ ಮುಖಂಡರು ಪಕ್ಷ ತೊರೆದಿರುವುದು ಮತ್ತೊಂದು ಆಘಾತ ಎದುರಿಸುವಂತಾಗಿದೆ.

ಎಸ್‍.ಎಂ.ಕೆ. ಬೆಂಬಲಿಗರಾಗಿದ್ದ ಸುರೇಶ್ ಗೌಡ ಅವರು ಮತ್ತು ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಎಲ್‍.ಆರ್. ಶಿವರಾಮೇಗೌಡ ಸಹ ಜೆಡಿಎಸ್‍ ಪಕ್ಷಕ್ಕೆ ಸೇರಲು ನಿರ್ಧರಿಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಜೊತೆಗೆ ಜೆಡಿಎಸ್ ವರಿಷ್ಠರ ವಿರುದ್ಧ ಬಂಡಾಯವೆದ್ದಿರುವ ಚೆಲುವರಾಯಸ್ವಾಮಿಗೆ ಪ್ರಬಲ ಸ್ಪರ್ಧೆ ಒಡ್ಡುವ ಸೂಚನೆ ಕೊಟ್ಟಂತಾಗಿದೆ.

(ಎನ್‍.ಬಿ.ಎನ್)

Leave a Reply

comments

Related Articles

error: