ಪ್ರಮುಖ ಸುದ್ದಿ

ಯೋಗೇಶ್ ಗೌಡ ಕೊಲೆ ಕೇಸ್ : ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐ ವಶಕ್ಕೆ

ರಾಜ್ಯ(ಧಾರವಾಡ)ನ.5:- ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣ (2016)ಕ್ಕೆ ಸಂಬಂಧಿಸಿ ವಿಚಾರಣೆ ಕೈಗೆತ್ತಿಕೊಂಡಿರುವ ಸಿಬಿಐ ಬೆಳಿಗ್ಗೆಯೇ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದೆ.

ಧಾರವಾಡ ಕಲ್ಯಾಣ ನಗರದಲ್ಲಿರುವ ಮನೆಗೆ ತೆರಳಿದ ಸಿಬಿಐ ಅಧಿಕಾರಿಗಳು ಅಲ್ಲಿಂದಲೇ ವಿನಯ್ ಕುಲಕರ್ಣಿ ಅವರನ್ನು ವಿಚಾರಣೆಗೆಂದು ಕರೆದೊಯ್ದಿದ್ದಾರೆ. ಧಾರವಾಡ ಉಪನಗರ ಠಾಣೆಗೆ ಕರೆದೊಯ್ದು ಅಲ್ಲಿ ವಿಚಾರಣೆ ಆರಂಭಿಸಿದ್ದು, ಅಲ್ಲಿ ಆರು ಸಿಬಿಐ ಅಧಿಕಾರಿಗಳಿದ್ದಾರೆ. ಇದಕ್ಕೂ ಮುನ್ನ ಸೆಪ್ಟೆಂಬರ್ ಮಧ್ಯಭಾಗದಲ್ಲಿ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್ ಕುಲಕರ್ಣಿ ಅವರನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
ಪ್ರಕರಣದ ಹಿನ್ನೆಲೆ
2016ರ ಜೂನ್ 15ರಂದು ಧಾರವಾಡದ ಸಪ್ತಾಪುರದ ಉದಯ್ ಜಿಮ್ ಬಳಿ ಯೋಗೀಶ್ ಗೌಡರನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಪ್ರಕರಣದ ಗಂಭೀರತೆ ಅರಿತ ಸರ್ಕಾರ 2019ರಲ್ಲಿ ಈ ಕೇಸನ್ನು ಸಿಬಿಐಗೆ ವರ್ಗಾಯಿಸಿತ್ತು. 6 ಆರೋಪಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಸಿಬಿಐ ತನಿಖೆ ಪ್ರಶ್ನಿಸಿ ಬಸವರಾಜ ಮುತ್ತಗಿ ಕೋರ್ಟ್ ಮೊರೆ ಹೋಗಿದ್ದರು. ಆಗ, ಸಿಬಿಐ ತನಿಖೆಗೆ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ತಡೆ ನೀಡಿತ್ತು. ಈ ಆದೇಶದ ವಿರುದ್ಧ ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟಿನ ಮೊರೆ ಹೋಗಿದ್ದರು. ಬಳಿಕ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂಕೋರ್ಟ್, ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ತದನಂತರ ಸಿಬಿಐ ಟೀಂ ಬೆಂಗಳೂರು ಮತ್ತು ತಮಿಳುನಾಡು ಮೂಲದ ಅಶ್ವತ್ಥ್, ಪುರುಷೋತ್ತಮ ಸೇರಿ ಐವರು ಆರೋಪಿಗಳನ್ನು ಬಂಧಿಸಿತ್ತು. ಬಸವರಾಜ್ ಮುತ್ತಗಿ ಕಡೆಯಿಂದ ಯೋಗೀಶ್ಗೌಡ ಕೊಲೆಗೆ ಸುಫಾರಿ ಪಡೆದಿರುವ ಆರೋಪವಿದೆ.
ಇದೇ ಕೇಸ್ ನಲ್ಲಿ ಹುಬ್ಬಳ್ಳಿ-ಧಾರವಾಡ ನಗರದ ಮಾಜಿ ಪೊಲೀಸ್ ಕಮಿಷನರ್ ಪಾಂಡುರಂಗ ಎಚ್. ರಾಣೆಗೆ ಸಿಬಿಐ ನೋಟಿಸ್ ನೀಡಿತ್ತು. ಬಳಿಕ ಪಾಂಡುರಂಗ ರಾಣೆ ಅವರು ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಈ ವೇಳೆ ಯೋಗೀಶ್ ಗೌಡ ಕೊಲೆ ಪ್ರಕರಣ ಕುರಿತು ಆಗ ಏನೆಲ್ಲ ಕ್ರಮ ಕೈಗೊಳ್ಳಲಾಗಿತ್ತು? ಘಟನೆ ಸಂಬಂಧ ಯಾವೆಲ್ಲ ಸಾಕ್ಷ್ಯಾಧಾರ ಪತ್ತೆಯಾಗಿತ್ತು. ಹೀಗೆ ಹಲವಾರು ಆಯಾಮದಲ್ಲಿ ವಿಚಾರಣೆ ನಡೆದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: