ದೇಶಪ್ರಮುಖ ಸುದ್ದಿವಿದೇಶ

ಮಹತ್ವದ 22 ದ್ವಿಪಕ್ಷೀಯ ಒಪ್ಪಂದಗಳಿಗೆ ಭಾರತ – ಬಾಂಗ್ಲಾ ಸಹಿ

ನವದೆಹಲಿ : ರಕ್ಷಣೆ, ಅಣುವಿದ್ಯುತ್‍ ಕ್ಷೇತ್ರ ಸೇರಿದಂತೆ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಮಹತ್ವದ 22 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಶನಿವಾರ ನಡೆದ ಉಭಯ ದೇಶಗಳ ಪ್ರಧಾನಿಗಳ ನಡುವಿನ ಮಾತುಕತೆ ಯಶಸ್ವಿಯಾಗಿದ್ದು, ಬಾಂಗ್ಲಾ ದೇಶದ ರಕ್ಷಣಾ ಕ್ಷೇತ್ರದ ಅಗತ್ಯಗಳನ್ನು ಪೂರೈಸಲು 5 ಬಿಲಿಯನ್ ಡಾಲರ್ ಸಾಲ ನೀಡುತ್ತಿರುವುದಾಗಿ ಪ್ರಧಾನಿ ಮೋದಿ ಘೋಷಿಸಿದರು.

ಬಾಂಗ್ಲಾ ಪ್ರಧಾನಿ ಷೇಕ್ ಹಸೀನಾ ಅವರ ಜೊತೆ ನವದೆಹಲಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಭಾರತ ಮತ್ತು ಬಾಂಗ್ಲಾ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಭಾರತವು ಬಾಂಗ್ಲಾದ ಶಶಸ್ತ್ರ ಪಡೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಇಚ್ಛಿಸುತ್ತದೆ. ತೀಸ್ತಾ ನದಿ ನೀರು ಹಂಚಿಕೆ ವಿವಾದಕ್ಕೂ ಶೀಘ್ರ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ” ಎಂದು ಹೇಳಿದರು.

ರಕ್ಷಣಾ ಕ್ಷೇತ್ರಕ್ಕೆ ಮಾತ್ರವಲ್ಲದೆ ಬಾಂಗ್ಲಾ ದೇಶದ ಇತರೆ ಆದ್ಯತಾ ವಲಯಗಳ ಯೋಜನೆಗಳ ಅನುಷ್ಠಾನಕ್ಕೆ ನೆರವಾಗುವ ನಿಟ್ಟಿನಲ್ಲಿ 4.5 ಬಿಲಿಯನ್ ಡಾಲರ್ ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ಮೋದಿ ಪ್ರಕಟಿಸರು.

ಬಾಂಗ್ಲಾದಲ್ಲಿ ನಿಮ್ಮ ಸರ್ಕಾರ ಮತ್ತು ಭಾರತದಲ್ಲಿ ನನ್ನ ಸರ್ಕಾರದಿಂದ ಇರುವಾಗ ತೀಸ್ತಾ ನದಿ ವಿವಾದ ಬಗೆಹರಿಸಲು ಪರಿಹಾರವೊಂದನ್ನು ರೂಪಿಸಲು ಸಾಧ್ಯ ಎಂಬುದು ನನ್ನ ಭಾವನೆ. ಭಯೋತ್ಪಾದನೆ ವಿಷಯದಲ್ಲಿ ಭಾರತ ಅಳವಡಿಸಿಕೊಂಡಿರುವ ‘ಶೂನ್ಯ-ಸಹಿಷ್ಟುತೆ’ ನೀತಿಯನ್ನು ಬಾಂಗ್ಲಾದೇಶವೂ ಅಳವಡಿಸಿಕೊಂಡಿದ್ದೇವೆ. ಈ ನೀತಿಯಿಂದಾಗಿ ಭಾರತ ಮತ್ತು ಬಾಂಗ್ಲಾ ಮಾತ್ರವಲ್ಲದೆ ಇಡೀ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗಿದೆ ಎಂದು ಬಾಂಗ್ಲಾ ಪ್ರಧಾನಿ ಷೇಕ್ ಹಸೀನಾ ಅವರನ್ನು ಮೋದಿ ಪ್ರಶಂಸಿದರು.

ಶಕ್ತಿ ಮತ್ತು ಇಂಧನ ಕ್ಷೇತ್ರವು ಆಧುನಿಕ ದಿನಮಾನದಲ್ಲಿ ಅಭಿವೃದ್ಧಿಗೆ ಅತ್ಯಗತ್ಯವಾಗಿದ್ದು, ಇಂಧನ ಸಶಕ್ತೀಕರಣದತ್ತ ಉಭಯ ದೇಶಗಳೂ ಸಹಕಾರ ವೃದ್ಧಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಪ್ರಧಾನಿ ಹೇಳಿದರು.

ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ :

1971 ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಮಡಿದ ಭಾರತೀಯ ಯೋಧರ ಗೌರವಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿಯವರು, ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ಭಂಗ ತರುವ ಮನಸ್ಥಿತಿಯೊಂದು ಭಯೋತ್ಪಾದನೆಗೆ ಸದಾ ಬೆಂಬಲ ನೀಡುತ್ತಿದೆ. ಇದು ದಕ್ಷಿಣ ಏಷ್ಯಾದ ಬೆಳವಣಿಗೆಯನ್ನು ತಡೆಯುತ್ತಿದೆ ಎಂದು ಪಾಕಿಸ್ತಾನದ ಹೆಸರು ಹೇಳದೆ ಪರೋಕ್ಷ ವಾಗ್ದಾಳಿ ನಡೆಸಿದರು.

ಭಾರತೀಯ ಹುತಾತ್ಮ ಯೋಧರ ನೆನೆದ ಹಸೀನಾ :

ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ 1971ರ ಯುದ್ಧದಲ್ಲಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ಯೋಧರ ತ್ಯಾಗ ಬಲಿದಾನವನ್ನು ನಾವು ಎಂದಿಗೂ ಸ್ಮರಿಸುತ್ತೇವೆ ಎಂದು ಬಾಂಗ್ಲಾದೇಶ ಪ್ರಧಾನಿ ಷೇಕ್ ಹಸೀನಾ ಅವರು ಇದೇ ಸಂದರ್ಭ ಹೇಳಿದರು.

ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವೂ ಉಭಯ ದೇಶಗಳ ಶಾಂತಿ ಸಮೃದ್ಧಿಗಾಗಿ ಶ್ರಮಿಸುತ್ತಿದೆ. ರಕ್ಷಣೆ ಮತ್ತು ಇತರೆ ಕ್ಷೇತ್ರಗಳಲ್ಲಿ ಭಾರತ ಸರ್ಕಾರದ ಸಹಕಾರ ಮೊದಲಿಗಿಂತ ಈಗ ಹೆಚ್ಚಾಗಿದ್ದು, ನಮ್ಮ ಎರಡೂ ದೇಶದ ಗಡಿಗಳು ಶಾಂತಿ ಮತ್ತು ಅಪರಾಧಮುಕ್ತ ವಾಗಬೇಕೆಂದು ತಾವು ಬಯಸುವುದಾಗಿ ಹಸೀನಾ ಹೇಳಿದರು.

(ಎನ್‍.ಬಿ.ಎನ್‍)

Leave a Reply

comments

Related Articles

error: