ಮೈಸೂರು

ದಸರಾ ಜಂಬೂ ಸವಾರಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯಿಂದ ಶಿಷ್ಟಾಚಾರ ಉಲ್ಲಂಘನೆ : ಶಾಸಕ ಸಾ.ರಾ.ಮಹೇಶ್ ಆರೋಪ

ಮೈಸೂರು,ನ.5:- ದಸರಾ ಜಂಬೂ ಸವಾರಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು ಪತ್ರದಲ್ಲಿ ಜಂಬೂ ಸವಾರಿಯ ಪುಷ್ಪಾರ್ಚನೆ ಸಮಯದಲ್ಲಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಮೇಯರ್ ಮತ್ತು ರಾಜವಂಶಸ್ಥರ ಬಳಿಕ ಜಿಲ್ಲಾಧಿಕಾರಿ ನಿಲ್ಲಬೇಕು. ಆದರೆ ಈ ಬಾರಿ ಜಿಲ್ಲಾಧಿಕಾರಿ ಅವರು ರಾಜವಂಶಸ್ಥರಿಗೆ ಸ್ಥಳಾವಕಾಶ ನೀಡದೆ ಅವರನ್ನು ಕೊನೆಯಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಇದು ಶಿಷ್ಟಾಚಾರ ಮತ್ತು ಸಂಪ್ರದಾಯದ ಉಲ್ಲಂಘನೆ ಎಂದು ಉಲ್ಲೇಖಿಸಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಾಲ್ಗೊಂಡಿಲ್ಲ. ಈ ಮೂಲಕ ಮಹಾಪುರುಷರೆಡೆಗೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ. ಜಿಲ್ಲಾಧಿಕಾರಿಗೆ ಶಿಷ್ಟಾಚಾರ, ನಾಡಿನ ಸಂಪ್ರದಾಯ ಮತ್ತು ಪರಂಪರೆಯ ಕುರಿತು ಸೂಕ್ತ ತಿಳುವಳಿಕೆ ನೀಡುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: