ಪ್ರಮುಖ ಸುದ್ದಿಮೈಸೂರು

ಮೈಸೂರು ಗ್ರಾಮೀಣ ಭಾಗದ 8 ವಿಧಾನಸಭಾ ಕ್ಷೇತ್ರದಲ್ಲೂ ಅದಾಲತ್ ಸಚಿವ ಎಸ್ ಟಿ ಸೋಮಶೇಖರ್

ಶಂಭುದೇವನಹಳ್ಳಿಯಲ್ಲಿ ಶಕ್ತಿ ಕೇಂದ್ರ ಹಾಗೂ ಮಹಾ ಶಕ್ತಿ ಕೇಂದ್ರದ ಪ್ರಮುಖರುಗಳ ಜೊತೆ ಪೂರ್ವಭಾವಿ ಸಭೆ : ವಿವಿಧ ಇಲಾಖೆಗಳ ಅದಾಲತ್ ಮೂಲಕ ಜನರ ಸಮಸ್ಯೆ ಪರಿಹಾರ

ಮೈಸೂರು,ನ.5:- ಮೈಸೂರಿನ ಗ್ರಾಮೀಣ ಭಾಗದ 8 ವಿಧಾನಸಭಾ ಕ್ಷೇತ್ರದಲ್ಲಿಯೂ ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅದಾಲತ್ ಮಾಡಲಾಗುವುದು. ಇದಕ್ಕಾಗಿ 15 ದಿನಗಳ ಮುಂಚೆ ಮನೆ ಮನೆಗೆ ಪಾಂಪ್ಲೆಟ್ ಕೊಟ್ಟು ಸಮಸ್ಯೆಗಳ ಬಗ್ಗೆ ಗಮನಹರಿಸಲಾಗುವುದು. ಈ ಮೂಲಕ ಅದಾಲತ್ ನಡೆಸಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ತೀ,ನರಸೀಪುರ ತಾಲೂಕಿನ ಶಂಭುದೇವನಹಳ್ಳಿಯಲ್ಲಿ ಶಕ್ತಿ ಕೇಂದ್ರ ಹಾಗೂ ಮಹಾ ಶಕ್ತಿ ಕೇಂದ್ರದ ಪ್ರಮುಖರುಗಳ ಜೊತೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮನ್ನು ಗೆಲ್ಲಿಸುವುದು ಕಾರ್ಯಕರ್ತರು, ಈಗ ಅಂತಹ ನಿಮ್ಮಗಳ ಚುನಾವಣೆ ಬಂದಿದೆ. ಹೀಗಾಗಿ ನಿಮ್ಮ ಋಣ ತೀರಿಸುವ ಸಂದರ್ಭ ನಮಗೆ ಈಗ ಬಂದಿದೆ. ನಾವು ನಿಮ್ಮ ಚುನಾವಣೆಗೆ ಶ್ರಮಿಸುತ್ತೇವೆ ಎಂದು ಸಚಿವರು ತಿಳಿಸಿದರು.
ನಾನೀಗ ಎರಡನೇ ಬಾರಿಗೆ ಜಿಲ್ಲಾ ಪ್ರವಾಸ ಮಾಡಿದ್ದೇನೆ. ಈ ಮೊದಲು 10 ವರ್ಷಕ್ಕೆ ಇದ್ದ ಮೀಸಲಾತಿಯನ್ನು 5 ವರ್ಷಕ್ಕೆ ಇಳಿಸಲಾಗಿದೆ. ಹೈಕೋರ್ಟ್ ತೀರ್ಪು ಪ್ರಕಟವಾದ ನಾಲ್ಕು , ಐದು ದಿನಗಳೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾಗಬಹುದು. ಹೀಗಾಗಿ ನಾವು ಅದಕ್ಕೆ ಸಿದ್ಧವಾಗಬೇಕಿದೆ ಎಂದು ಹೇಳಿದರು. ನಾನು ಕಾರ್ಯಕರ್ತರ ಸಭೆ ನಡೆಸಿದಾಗ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಗೌರವವನ್ನು ಕೊಡುತ್ತಿಲ್ಲ. ಕೆಲಸ ಮಾಡಿಕೊಡುವುದಿಲ್ಲ ಎಂಬ ದೂರುಗಳು ಬಂದಿವೆ. ಆ ಬಳಿಕ ಕಾರ್ಯಕರ್ತರ ಕೆಲಸ ನ್ಯಾಯಯುತವಾಗಿದ್ದರೆ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಸಚಿವರು ತಿಳಿಸಿದರು.
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ಶಂಭುದೇವನಹಳ್ಳಿಯಲ್ಲಿ ಶಕ್ತಿ ಕೇಂದ್ರ ಹಾಗೂ ಮಹಾ ಶಕ್ತಿ ಕೇಂದ್ರದ ಪ್ರಮುಖರುಗಳ ಜೊತೆ ಪೂರ್ವಭಾವಿ ಸಭೆ ನಡೆಸಿ ಸಚಿವರು ಮಾತನಾಡಿದರು.
ಮೈಸೂರು ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷರಾದ ಮಂಗಳಾ ಸೋಮಶೇಖರ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಬೇಕಾದಲ್ಲಿ, ಈಗ ಬರುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡು ಗೆಲ್ಲಬೇಕು. ನಮ್ಮ ಎಲ್ಲ ಪ್ರಯತ್ನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು ಸಾಥ್ ಕೊಡುತ್ತಿದ್ದು, ಬೆಂಬಲ ನೀಡುತ್ತಿದ್ದಾರೆ. ಅವರ ಈ ಸಹಕಾರ ನಮ್ಮ ಪುಣ್ಯ ಎಂದು ತಿಳಿಸಿದರು.
ಬಿಜೆಪಿ ಮುಖಂಡರು ಹಾಗೂ ಮಾಜಿ ಶಾಸಕರಾದ ಸಿ. ರಮೇಶ್ ಮಾತನಾಡಿ, 15 ರಿಂದ 20 ವರ್ಷಗಳ ಇತಿಹಾಸದಲ್ಲಿ ಇಂತಹ ಸಭೆ ನಡೆಯುತ್ತಿರುವುದು ಇದೇ ಮೊದಲು. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಪರಿಶ್ರಮ ತುಂಬಾ ಇದೆ. ಅವರು ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಭೇಟಿ ಕೊಡುತ್ತಿದ್ದಾರೆ. ಪಕ್ಷದ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
ಸಚಿವರಾದ ಸೋಮಶೇಖರ್ ಅವರ ನಾಯಕತ್ವದಲ್ಲಿ ನಾವು ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಗೆಲ್ಲಿಸಿ ಕೊಡುತ್ತೇವೆ ಎಂದು ಸಚಿವರಿಗೆ ಈ ಮೂಲಕ ಮಾತುಕೊಡುತ್ತಿದ್ದೇವೆ ಎಂದು ಹೇಳಿದರು.
ನಮ್ಮ ಕಾರ್ಯಕರ್ತರಿಗೆ ಸರ್ಕಾರದ ವತಿಯಿಂದ ಏನೆಲ್ಲ ಸೌಕರ್ಯ ಮಾಡಬಹುದೋ ಅದನ್ನು ನಾವುಗಳು ಈಡೇರಿಸಿಕೊಡುತ್ತೇವೆ. ನನಗೆ ಎಲ್ಲ ಪಂಚಾಯಿತಿಗಳಲ್ಲೂ ಸಭೆ ಮಾಡಬೇಕೆಂಬುದಿತ್ತು.ಆದರೆ, ಸಮಯದ ಅಭಾವ ಹಾಗೂ ಕೊರೋನಾ ಭೀತಿ ಹಿನ್ನೆಲೆ ಈ ರೀತಿಯಾಗಿ ಎರಡು ಮೂರು ಪಂಚಾಯಿತಿಗಳನ್ನು ಸೇರಿಸಿ ಪಕ್ಷದ ಸಭೆ ನಡೆಸುತ್ತಿದ್ದೇನೆ ಎಂದರು.
ಪಕ್ಷದ ಮುಖಂಡರಾದ ಮಹದೇವಯ್ಯ ಮಾತನಾಡಿ, ಪಕ್ಷದ ಕಾರ್ಯಕರ್ತರನ್ನು ಬೇರುಮಟ್ಟದಿಂದಲೇ ಗೆಲ್ಲಿಸಬೇಕು. ಗ್ರಾಮ ಪಂಚಾಯಿತಿಯಲ್ಲಿ ಗೆದ್ದರೆ, ತಾಲೂಕು, ಜಿಲ್ಲಸ ಪಂಚಾಯಿತಿಗಳಲ್ಲೂ ಗೆಲುವು ಸಾಧಿಸಲು ಅನುಕೂಲವಾಗಲಿದೆ. ಹೀಗಾಗಿ ಚುನಾವಣೆ ಘೋಷಣೆಗೆ ಮುನ್ನವೇ ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅವರ ಶ್ರಮಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ತಿಳಿಸಿದರು.
ಟಿ.ನರಸೀಪುರ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರಾದ ಕೆ.ಸಿ.ಲೋಕೇಶ್, ಮಾಜಿ ಶಾಸಕರಾದ ಬಾರ್ತಿಶಂಕರ್, ಮೂಗೂರು ಕ್ಷೇತ್ರ ತಾಪಂ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.
ಮುಡುಕನಪುರದಲ್ಲಿ ಶಕ್ತಿಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಸಭೆ
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮುಡುಕನಪುರದಲ್ಲಿ ಬಿಜೆಪಿ ಶಕ್ತಿಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು, ಪಕ್ಷದ ಕಾರ್ಯಕರ್ತರಿಗೆ ಚುನಾವಣೆ ಉದ್ದೇಶ ಹಾಗೂ ಗೆಲುವಿನ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಯಕರ್ತರ ಚುನಾವಣೆಗೆ ನಾಯಕರಾದವರು ಬೆಂಬಲಿಸುವುದು ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಬೆಂಬಲವಿದೆ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಗೆಲ್ಲಬೇಕು ಎಂದು ಕರೆ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: