ಮೈಸೂರು

ಒಳಾಂಗಣ-ಹೊರಾಂಗಣ ಕಾರ್ಯಕ್ರಮ ಗಳಿಗೆ ನಿರ್ಬಂಧ ವಿಧಿಸಿ ಡಾ.ಚಂದ್ರಗುಪ್ತ ಆದೇಶ

ಮೈಸೂರು,ನ.5:- ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮತ್ತು ಮಾಸ್ಕ್ ಧರಿಸದೆ ಹಲವಾರು ಒಳಾಂಗಣ ಮತ್ತು ಹೊರಾಂಗಣ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು
ಗಮನಿಸಲಾಗಿದೆ. ಈ ರೀತಿಯ ನಿರ್ಲಕ್ಷ್ಯದಿಂದ ಕೋವಿಡ್-19 ಸಾಂಕ್ರಾಮಿಕ ರೋಗವು
ತೀವ್ರಗತಿಯಲ್ಲಿ ಹರಡುವಂತಾಗುತ್ತದೆ. ಇದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸರ್ಕಾರದ
ಆದೇಶದ ಮರು-ತೆರವು ಮಾರ್ಗಸೂಚಿಯ ಅನ್ವಯ ಒಳಾಂಗಣ ಸ್ಥಳಗಳಲ್ಲಿ ಹಾಗೂ ಹೊರಾಂಗಣ ಮೈದಾನಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳಿಗೆ ನಿರ್ಬಂಧಗಳನ್ನು ವಿಧಿಸಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
06/11/2020 ರಿಂದ 30/11/2020 ರ ಮಧ್ಯರಾತ್ರಿ 12 ಗಂಟೆಯವರೆಗೆ – ಮೈಸೂರು ನಗರ ಪೊಲೀಸ್ ಕಮೀಷನರೇಟ್ ಘಟಕದ ವ್ಯಾಪ್ತಿಯಲ್ಲಿ ಆಯೋಜಿಸುವ ಎಲ್ಲಾ ಸಾರ್ವಜನಿಕ ಒಳಾಂಗಣ ಹಾಗೂ ಹೊರಾಂಗಣ ಕಾರ್ಯಕ್ರಮಗಳಿಗೆ ಕೆಳಕಂಡ ನಿರ್ದೇಶನಗಳನ್ನು ನೀಡಿ ಆದೇಶ ಹೊರಡಿಸಿರುತ್ತಾರೆ.
ಎಲ್ಲಾ ಒಳಾಂಗಣ ಮತ್ತು ಹೊರಾಂಗಣದಲ್ಲಿ ಆಯೋಜಿಸುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಕಾರ್ಯವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಆಯೋಜಿಸುವ ಕಾರ್ಯಕ್ರಮಕ್ಕೆ ಕೋವಿಡ್-19 ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಒಬ್ಬರು ಜವಾಬ್ದಾರಿಯುತ ಪ್ರತಿನಿಧಿಯನ್ನು ಆಯೋಜಕರೇ ನೇಮಿಸಿ ಅವರ ಮುಖಾಂತರ ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ಒಳಾಂಗಣ ಸ್ಥಳಗಳಲ್ಲಿ 200 ಜನರ ಗರಿಷ್ಠ ಮಿತಿ ಒಳಪಟ್ಟು ಸಭಾ ಭವನದ ಒಟ್ಟು
ಸಾರ್ಮರ್ಥ್ಯ ದ ಗರಿಷ್ಠ ಶೇಕಡ 50% ರಷ್ಟಕ್ಕೆ ಹಾಗೂ ಹೊರಾಂಗಣ ಸ್ಥಳಗಳಲ್ಲಿ,
ಮೈದಾನ/ಸ್ಥಳದ ವಿಸ್ತೀರ್ಣವನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಅಂತರದ ಕಟ್ಟುನಿಟ್ಟಿನ
ಪಾಲನೆಯ ಅನುಗುಣವಾಗಿ ಅನುಮತಿ ನೀಡಲಾಗುವುದು. ಕೋವಿಡ್-19 ಮಾರ್ಗಸೂಚಿಗಳ ಅನುಷ್ಠಾನಕ್ಕಾಗಿ ವ್ಯಾಪಾರ ಮಳಿಗೆ, ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಧಾರ್ಮಿಕ ಸ್ಥಳ, ಸಿನಿಮಾ ಮಂದಿರ, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಒಬ್ಬರು ಜವಾಬ್ದಾರಿಯುತ ಅನುಷ್ಠಾನ ಪ್ರತಿನಿಧಿಯನ್ನು ನೇಮಿಸಿ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸುವುದು. ಠಾಣಾಧಿಕಾರಿಗಳು ಈ ಪಟ್ಟಿಯನ್ನು ಠಾಣಾವಾರು ನಿರ್ವಹಿಸಿ ಅನುಷ್ಠಾನ ಪ್ರತಿನಿಧಿಗಳೊಂದಿಗೆ ಸಮನ್ವಯ
ಸಾಧಿಸಬೇಕು ಎಂದಿದ್ದಾರೆ. ಕೋವಿಡ್-19 ಮಾರ್ಗಸೂಚಿ “ಅನುಷ್ಠಾನ ಪ್ರತಿನಿಧಿ”ಗಳ ಕರ್ತವ್ಯ ಹೀಗಿದೆ. ತಮ್ಮ ಉಸ್ತುವಾರಿಗೆ ಬರುವ ಸಭಾ ಭವನ/ವಾಣಿಜ್ಯ ಮಳಿಗೆ/ಹೋಟೆಲ್/ಬಹಿರಂಗ ಕಾರ್ಯಕ್ರಮ ಇತ್ಯಾದಿಗಳಲ್ಲಿ ಕೋವಿಡ್-19 ಅನ್ನು ತಡೆಗಟ್ಟಲು ಸರ್ಕಾರದಿಂದ ವಿಧಿಸಿರುವ ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ಸಂಪೂರ್ಣ ಜವಾಬ್ದಾರಿ ವಹಿಸುವುದು ಮತ್ತು ಸ್ಥಳದಲ್ಲಿ ಉಪಸ್ಥಿತರಿರಬೇಕು.
ಕಾರ್ಯಕ್ರಮ ಆಯೋಜಿಸಲು ನಿಗದಿಪಡಿಸಿದ ಸಭಾ ಭವನ ಮತ್ತು ಹೊರಾಂಗಣಗಳಲ್ಲಿ
ಸೇರುವ ಜನರಿಗೆ ಸಾಮಾಜಿಕ ಅಂತರವನ್ನು ಗುರುತಿಸಿ, ಅದರಂತೆ ಆಸನದ ವ್ಯವಸ್ಥೆಯನ್ನು
ಕಲ್ಪಿಸುವುದು ಮತ್ತು ಯಾವುದೇ ಕಾರಣಕ್ಕೂ ನಿಗದಿಪಡಿಸಿದ ಜನರ ಸಂಖ್ಯೆಯನ್ನು ಮೀರದಂತೆ
ಕ್ರಮವಹಿಸಬೇಕು. ಕಾರ್ಯಕ್ರಮಗಳನ್ನು ಆಯೋಜಿಸುವ ಸಭಾಂಗಣ ಹಾಗೂ ಮೈದಾನಗಳ ಪ್ರವೇಶದ್ವಾರಗಳಲ್ಲಿ
ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಜರ್‍ನ ವ್ಯವಸ್ಥೆ ಕಲ್ಪಿಸುವುದು ಹಾಗೂ ಶುಚಿತ್ವ
ಕಾಪಾಡುವುದು. ಕೋವಿಡ್-19 ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಅನುವಾಗುವಂತೆ
ಸ್ವಯಂಸೇವಕರನ್ನು ತಾವೇ ನೇಮಕ ಮಾಡುವುದು. ಹಾಗೂ ಈ ಕುರಿತು ಪೊಲೀಸರ
ಸಹಾಯವನ್ನು ಪಡೆಯುವುದು. ಒಟ್ಟಾರೆ ಕೋವಿಡ್-19 ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಪ್ರತಿನಿಧಿಯು ಸರ್ಕಾರವು ವಿಧಿಸಿರುವ ಕೋವಿಡ್-19 ತಡೆಗಟ್ಟುವ ಮಾರ್ಗಸೂಚಿಗಳ ಉಲ್ಲಂಘನೆಯಾಗದಂತೆ ಪೂರ್ಣ ಜವಾಬ್ದಾರಿ ವಹಿಸುವುದು.
ಈ ಆದೇಶವು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ಅನ್ವಯಿಸುತ್ತದೆ. ಸರ್ಕಾರಿ
ಕಾರ್ಯಕ್ರಮಗಳನ್ನು ಆಯೋಜಿಸುವವರು ಸಂಬಂಧಪಟ್ಟ ಇಲಾಖೆಯಿಂದ ಒಬ್ಬ ಜವಾಬ್ದಾರಿಯುತ
ಅಧಿಕಾರಿಯನ್ನು ಕೋವಿಡ್-19 ಮಾರ್ಗಸೂಚಿ ಅನುಷ್ಠಾನ ಅಧಿಕಾರಿಯನ್ನಾಗಿ ನೇಮಿಸಿ ಪೊಲೀಸ್
ಇಲಾಖೆಯಿಂದ ಪೂರ್ವಾನುಮತಿ ಪಡೆದು ಕೋವಿಡ್-19 ರ ಮಾರ್ಗಸೂಚಿಗಳು
ಉಲ್ಲಂಘನೆಯಾಗದಂತೆ ಕಾರ್ಯಕ್ರಮಗಳನ್ನು ಆಯೋಜಿಸಲು ಅಗತ್ಯ ಕ್ರಮವಹಿಸುವಂತೆ ಆದೇಶಿಸಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: