ಮೈಸೂರು

ಪ್ರಶಸ್ತಿಗಳು ಒಲಿದು ಬರಬೇಕು : ಡಾ.ಅರವಿಂದ ಮಾಲಗತ್ತಿ

ಮೈಸೂರಿನ  ಶ್ರೀ ರವಿವರ್ಮ ಚಿತ್ರಕಲಾ ಶಾಲೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ರಾಜ ರವಿವರ್ಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಂವತ್ಸರಿಕ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ‍್ಘಾಟಿಸಿದ  ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಅರವಿಂದ ಮಾಲಗತ್ತಿ ಮಾತನಾಡಿ, ಕಲಾವಿದರು ನಾಡಿನ ನಿರಂಕುಶ ಪ್ರಭುಗಳು. ಇನ್ನೊಬ್ಬರನ್ನು ಓಲೈಸಲು ಕಲಾಕೃತಿ ಬಿಡಿಸಿದರೆ ಆತ ಉತ್ತಮ ಕಲಾವಿದನಾಗಲು ಸಾಧ್ಯವಿಲ್ಲ. ಬದಲಾಗಿ ವಿದೂಷಕನಾಗುತ್ತಾನೆ. ವಾಸ್ತವವನ್ನು ಯಥಾಸ್ಥಿತಿಯಲ್ಲಿ ಕಟ್ಟಿಕೊಡಬೇಕು.  ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸದಿದ್ದರೂ ಆತ ಕಲಾವಿದನಲ್ಲ. ಸಾಹಿತಿ ಇಲ್ಲದೇ ಕಲಾವಿದನಿಲ್ಲ. ಇಬ್ಬರಲ್ಲೂ ಪರಸ್ಪರ ಪೂರಕತೆ ಇರಬೇಕು ಎಂದು ಹೇಳಿದರು.

ಕೇವಲ ಪ್ರಶಸ್ತಿ ಪಡೆಯಲು ಕೆಲಸ ಮಾಡಿದರೆ ಆತ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ.  ಪ್ರಶಸ್ತಿಗಳು ತಾವಾಗಿಯೇ ಒಲಿದು ಬರಬೇಕು. ನಾವು ಅದರ ಹಿಂದೆ ಹೋಗಬಾರದು. ಈ ಸರ್ಕಾರಗಳು ನೀಡುವ ಪ್ರಶಸ್ತಿಗಳಿಗಿಂತ ಸಣ್ಣ ಪುಟ್ಟ ಸಂಸ್ಥೆಗಳು ನೀಡುವ ಪ್ರಶಸ್ತಿ ಹಿರಿದಾಗಿರುತ್ತವೆ. ನಮ್ಮ ರಾಜ್ಯ ಸರ್ಕಾರವು ರಾಜ ರವಿವರ್ಮನ ಹೆಸರಿನಲ್ಲಿ ಕಲಾವಿದರಿಗೆ ಯಾವ ಮಹೋನ್ನತ ಪ್ರಶಸ್ತಿಯನ್ನೂ ಸ್ಥಾಪಿಸಿಲ್ಲ. ಪಂಪ ಪ್ರಶಸ್ತಿಗೆ ಸಮನಾದ ರೀತಿಯಲ್ಲಿ ಕಲಾವಿದರಿಗೂ ಸಹ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದರು.

ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಲಲಿತಕಲಾ ಅಕಾಡೆಮಿಯ ಆಡಳಿತಾಧಿಕಾರಿ ಚಿ.ಸು.ಕೃಷ್ಣ ಸೆಟ್ಟಿ  ಮಾತನಾಡಿ, ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಕೆಲಸ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ  ಸಿಗುತ್ತವೆ ಎನ್ನುವುದಕ್ಕೆ ನಾನೇ ಜ್ವಲಂತ ಉದಾಹರಣೆ ಎಂದರು.

ನಮ್ಮ ಕೃತಿಗಳಲ್ಲಿ ಪ್ರಾಮಾಣಿಕತೆ ಇರಬೇಕು. ಕಲಾವಿದ ವರ್ತಮಾನದ ಶಿಶು. ತಮ್ಮೊಳಗಿನ ಧ್ವನಿಯನ್ನು ಪ್ರಾಮಾಣಿಕತೆಯಿಂದ ಅಭಿವ್ಯಕ್ತಿಗೊಳಿಸಿದಾಗ ಮಾತ್ರ ಉತ್ತಮ  ಸ್ಪಂದನೆ ಸಿಗಲು ಸಾಧ್ಯ. ಯುರೋಪಿನ ದೇಶಗಳಲ್ಲಿ ಕಲಾವಿದರ ಒಡನಾಟದಿಂದ ಸಾಹಿತಿಗಳು ಬೆಳೆದಿರುವ ಉದಾಹರಣೆಗಳು ಇವೆ. 19 ನೇ ಶತಮಾನದ ಅಂತ್ಯಕ್ಕೆ ಸಾಹಿತ್ಯಕ್ಕೆ ಇದ್ದ ಪ್ರಾಶಸ್ತ್ಯವೆಲ್ಲಾ ಚಿತ್ರಕಲೆ ಮತ್ತು ದೃಶ್ಯಕಲೆಗೆ ಸಿಕ್ಕಿತ್ತು ಎಂದು ಹೇಳಿದರು.

ನಮ್ಮ ರಾಜ್ಯ ಸರ್ಕಾರ ಇನ್ನಾದರೂ ದೃಶ್ಯಕಲಾವಿದರಿಗೆ ಮಹೋನ್ನತ ಪ್ರಶಸ್ತಿ ನೀಡಬೇಕು. ತನ್ಮೂಲಕ ಕಲೆಯ ಚಟುವಟಿಕೆಗಳು ಬೆಳೆಯಬೇಕು. ಚಿತ್ರಕಲೆ ಮತ್ತು ದೃಶ್ಯಕಲೆಯ ಜೊತೆಗೆ ನಮ್ಮ ಮನಸ್ಸನ್ನು ತೊಡಗಿಸಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಚಿ.ಸು.ಕೃಷ್ಣ ಸೆಟ್ಟಿ ಅವರಿಗೆ ರಾಜ ರವಿವರ್ಮ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕಲಾ ಶಾಲೆಯ ವಾರ್ಷಿಕ ಸಾಧಕರಾದ ಪೂಜಾ ಮೆಹತ, ಮೋಹನ್ ರಾಜ್ ಮತ್ತು ಕುಮಾರ ಬಿ. ಇವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರವಿವರ್ಮ ಚಿತ್ರಕಲಾ ಶಾಲೆಯ ಪ್ರಾಚಾರ್ಯ ಶಿವಕುಮಾರ ಕೆಸರಮಡು, ಕಾಡಾದ ಮುಖ್ಯಸ್ಥ ಬಸವರಾಜ ಮುಸವಳಗಿ ಉಪಸ್ಥಿತರಿದ್ದರು. (ಎಲ್.ಜಿ.ಎಸ್.ಎಚ್)

Leave a Reply

comments

Related Articles

error: