ಕರ್ನಾಟಕಪ್ರಮುಖ ಸುದ್ದಿ

ನಟಿ ಉಮಾಶ್ರೀ ಮನೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರ ಬಂಧನ

ತೇರದಾಳ,(ಬಾಗಲಕೋಟೆ),ನ.9-ಮಾಜಿ ಸಚಿವೆ, ನಟಿ ಉಮಾಶ್ರೀ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ತೇರದಾಳ ಪೊಲೀಸರು ಬಂಧಿಸಿದ್ದಾರೆ.

ಜಮಖಂಡಿ ಶಹರದ ಚೌಡಯ್ಯ ನಗರದ ಯಲ್ಲಪ್ಪ ಉರ್ಫ್ ರಾಮಾಚಾರಿ ಹಾಗೂ ಮುಧೋಳದ ದುರ್ಗಪ್ಪ ಫಕೀರಪ್ಪ ವಾಲ್ಮಿಕಿ ಬಂಧಿತ ಆರೋಪಿಗಳು. ಇವರು ಉಮಾಶ್ರೀ ಅವರ ಮನೆಯಲ್ಲಿ ಎರಡು ಲಕ್ಷ ನಗದು ಕಳ್ಳತನ ಮಾಡಿದ್ದರು. ಇವರನ್ನು ಹಣದ ಸಮೇತ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಬಂಧಿತರು ಅಕ್ಟೋಬರ್ 31ರಂದು ರಬಕವಿ ಪಟ್ಟಣದ ವಿದ್ಯಾನಗರದಲ್ಲಿನ ಉಮಾಶ್ರೀ ಮನೆಯ ಕೀಲಿ ಮುರಿದು ಎರಡು ಲಕ್ಷ ನಗದು ಹಣವನ್ನು ದೋಚಿಕೊಂಡು ಪರಾರಿ ಆಗಿದ್ದರು. ಆದರೆ, ಅವರಿಗೆ ತಾವು ಮಾಜಿ ಸಚಿವೆಯ ಮನೆಯಲ್ಲಿ ಕಳ್ಳತನ ಮಾಡಿದ್ದೇವೆ ಎಂಬುದು ಗೊತ್ತೇ ಇರಲಿಲ್ಲ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿ ಆಗಿದ್ದ ಯಲ್ಲಪ್ಪ ಉರ್ಫ್ ರಾಮಾಚಾರಿ, ಅಕ್ಟೋಬರ್23ರಂದು ವಿಜಯಪುರ ಕೇಂದ್ರ ಕಾರಾಗ್ರಹದಿಂದ ಬಿಡುಗಡೆ ಆಗಿರುವ ಬಗ್ಗೆ ಮಾಹಿತಿ ಪಡೆದ ತನಿಖಾ ತಂಡ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ತಾನು ಇನ್ನೊಬ್ಬ ಆರೋಪಿ ದುರ್ಗಪ್ಪ ಎಂಬುವನ ಜೊತೆಗೆ ಕಳ್ಳತನ ಮಾಡಿರುವುದಾಗಿ ರಾಮಾಚಾರಿ ಒಪ್ಪಿಕೊಂಡಿದ್ದಾನೆ. ಎರಡನೇ ಆರೋಪಿ ದುರ್ಗಪ್ಪನನ್ನು ಕೂಡ ಪೊಲೀಸರು ಬಂಧಿಸಿದ್ದು, ಆತನಿಂದ 98 ಸಾವಿರ ನಗದು ಹಣವನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಮೊದಲನೇ ಆರೋಪಿ ಯಲ್ಲಪ್ಪ ಉರ್ಫ ರಾಮಾಚಾರಿ ಗಡ್ಡಿಯನ್ನು ನವೆಂಬರ್ 6ರಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಎರಡನೇ ಆರೋಪಿ ದುರ್ಗಪ್ಪನನ್ನು ನವೆಂಬರ್ 8ರಂದು ಬಂಧಿಸಿ ನ್ಯಾಯಾಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿ ಬನಹಟ್ಟಿ ಸಿಪಿಐ ಜೆ.ಕರುಣಶೇಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: