ಮೈಸೂರು

ಬುದ್ಧಿವಾದ ಹೇಳಿದ ತಾಯಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ ಮಗ

ಮೈಸೂರು,ನ.11:- ಅಣ್ಣನ ಮನೆಗೆ ಪದೇ ಪದೇ ಹೋಗಬೇಡ ಎಂದು ತಿಳಿಹೇಳಿದ ವೃದ್ಧ ತಾಯಿಗೆ ತನ್ನ ಮಗನೇ ತೀವ್ರ ಹಲ್ಲೆ ನಡೆಸಿರುವ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ಗಾಗೇನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ರಾಜು ಅವರ ಪತ್ನಿ ಜಯಲಕ್ಷ್ಮಿ ಎಂಬವರೇ ತನ್ನ ಮಗನಿಂದಲೇ ಹಲ್ಲೆಗೆ ಒಳಗಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿರುವ ದುರ್ದೈವಿಯಾಗಿದ್ದಾರೆ.
ರಾಜು ಅವರ ಹಿರಿಯ ಮಗ ಮಂಜುನಾಥ್ ಮತ್ತು ಸೊಸೆ ರೂಪಾ ಪ್ರತ್ಯೇಕವಾಗಿ ಗ್ರಾಮದಲ್ಲೇ ಬೇರೆ ಮನೆಯಲ್ಲಿ ಸಂಸಾರ ಸಾಗಿಸುತ್ತಿದ್ದಾರೆ. ಇವರ ಕಿರಿಯ ಮಗ ರಾಘವೇಂದ್ರ ಅವಿವಾಹಿತನಾಗಿದ್ದು, ತಂದೆ ತಾಯಿಯೊಂದಿಗೆ ವಾಸವಾಗಿದ್ದ. ಇತ್ತೀಚೆಗೆ ಪ್ರತಿ ದಿನ ಅಣ್ಣನ ಮನೆಗೆ ಹೋಗಿ ಅಲ್ಲೇ ವಾಸ್ತವ್ಯ ಹೂಡುತ್ತಿದ್ದು, ಮನೆಗೆ ಬರುತ್ತಿರಲಿಲ್ಲ .ಹೆಚ್ಚಾಗಿ ಅಲ್ಲಿಯೇ ಇರುತ್ತಿದ್ದುದನ್ನು ಪ್ರಶ್ನಿಸಿ, ಹೆಚ್ಚಾಗಿ ಅಲ್ಲಿಯೇ ವಾಸ್ತವ್ಯ ಇರಬೇಡ ಎಂದು ತಿಳಿ ಹೇಳಿದ ತಾಯಿ ಜೊತೆ ಮಾತಿಗೆ ಮಾತು ಬೆಳೆದು ಪಕ್ಕದಲ್ಲೇ ಬಿದ್ದಿದ್ದ ಕಬ್ಬಿಣದ ಕೋಲಿನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿ ನಿತ್ರಾಣಗೊಂಡು ಕೆಳಗೆ ಬಿದ್ದಾಗ ತಂದೆ ರಾಜು ಪತ್ನಿಯನ್ನು ತಕ್ಷಣ ಹುಣಸೂರು ಅಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ದೂರು ನೀಡಿ ಬುದ್ದಿವಾದ ಹೇಳಿದಕ್ಕೆ ನನ್ನ ಮಗ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ವಯೋವೃದ್ಧರಾದ ನಮಗೆ ರಕ್ಷಣೆ ನೀಡಬೇಕು ಎಂದು ಕೋರಿದ್ದಾರೆ. ಬಿಳಿಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: