ಪ್ರಮುಖ ಸುದ್ದಿಮೈಸೂರು

ಸಾರ್ವಜನಿಕರಿಂದ ಒಂದು ರೂ. ಶುಲ್ಕ ಪಡೆಯದಂತೆ ಆರಂಭಿಸುವ ವ್ಯವಸ್ಥೆಯನ್ನು ಜ.1ರಂದು ಘೋಷಿಸಲಾಗುವುದು : ಸಚಿವ ಡಾ.ಕೆ.ಸುಧಾಕರ್

ಮೈಸೂರು,ನ.11:- ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತನಕ ಎಲ್ಲಾ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಸಾರ್ವಜನಿಕರಿಂದ ಒಂದು ರೂ. ಶುಲ್ಕ ಪಡೆಯದಂತೆ ಆರಂಭಿಸುವ ವ್ಯವಸ್ಥೆಯನ್ನು ಜ.1ರಂದು ಘೋಷಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾಲಯದ ಡೀನ್ ಕಚೇರಿಯಲ್ಲಿ ಬುಧವಾರ ಕಾಲೇಜು ಮತ್ತು ಅಂಗ ಆಸ್ಪತ್ರೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುವಾಗ ಈ ಮಹತ್ವದ ವಿಚಾರವನ್ನು ಹೊರ ಹಾಕಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಸೇರದಂತೆ ಯಾವುದೇ ಪರೀಕ್ಷೆಗಳನ್ನು ಮಾಡದೆ ಖಾಸಗಿ ಲ್ಯಾಬ್ ‌ಗೆ ಕಳುಹಿಸಲಾಗುತ್ತದೆ. ಕೆಲವು ಲ್ಯಾಬ್ ‌ಗಳಿಗೆ ಸರ್ಕಾರಿ ವೈದ್ಯರೇ ಪಾಲುದಾರರಾಗಿದ್ದಾರೆ. ಹಾಗಾಗಿ ಇದನ್ನು ತಪ್ಪಿಸಲು ಜ.1ರಿಂದ ರಕ್ತಪರೀಕ್ಷೆ, ಎಂಆರ್‌ಐ, ಸಿಟಿ ಸ್ಕ್ಯಾನ್ ಸೇರಿ ಯಾವುದೇ ತರಹದ ಪರೀಕ್ಷೆಗಳಿಗೂ ಶುಲ್ಕ ಪಡೆಯುವಂತಿಲ್ಲ ಎಂದರು.

ಸರ್ಕಾರಿ ಆಸ್ಪತ್ರೆಗಳ ನೂರು ಮೀಟರ್ ದೂರದ ಒಳಗೆ ಯಾವುದೇ ಖಾಸಗಿ ಮೆಡಿಕಲ್ ಷಾಪ್ ಇರಬಾರದು. ಸರ್ಕಾರ ನೀಡುವ ಔಷಧ, ವೈದ್ಯಕೀಯ ಉಪಕರಣಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಕೊಡಲು ಹಾಗೂ ಮಾನಿಟರಿಂಗ್ ಮಾಡಲು ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು.

ಶೀಘ್ರವೇ ಅಧೀಕ್ಷಕರ ನೇಮಕ

ಮೈಸೂರಿನಲ್ಲಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತಕ್ಷಣವೇ ವೈದ್ಯಕೀಯ ಅಧೀಕ್ಷಕರನ್ನು ನೇಮಿಸಲಾಗುವುದು. ಕಟ್ಟಡಕ್ಕೆ ಬೇಕಾದ ಉಪಕರಣಗಳ ಖರೀದಿಗೆ ಟೆಂಡರ್ ಕರೆದಿರುವ ಹಿನ್ನೆಲೆಯಲ್ಲಿ ಅದಷ್ಟು ಬೇಗನೆ ಸೇವೆ ಆರಂಭಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ಮೆಡಿಕಲ್ ಕಾಲೇಜು ಮಾದರಿಯಲ್ಲೇ ಸ್ಕಿಲ್ ಲ್ಯಾಬ್ ಅನ್ನು ಎಂಎಂಸಿಯಲ್ಲಿ ಆರೋಗ್ಯ ವಿವಿ ಮೂಲಕ ಸ್ಥಾಪಿಸಲಾಗುವುದು. ಇಲ್ಲಿನ ೪ ಆಸ್ಪತ್ರೆಗಳ ಮೇಲುಸ್ತುವಾರಿಗೆ ವಿಶೇಷ ಸಮಿತಿಗಳನ್ನು ರಚಿಸಲಾಗುವುದು ಎಂದ ಸಚಿವರು, ಟ್ರಾವಾ ಕೇರ್ ಸೆಂಟರ್ ಕಾಮಗಾರಿ ವಿಳಂಬಕ್ಕೆ ಕಾರಣಗಳನ್ನು ಕೇಳಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.

Leave a Reply

comments

Related Articles

error: