ಪ್ರಮುಖ ಸುದ್ದಿಮೈಸೂರು

ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಪರಿಹಾರ ನೀಡದ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು ಸತ್ತಂತಿದೆ : ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

ಮೈಸೂರು,ನ.13:- ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ನಾಲ್ಕು ತಿಂಗಳಾದರೂ ಪರಿಹಾರ ನೀಡದ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು ಸತ್ತಂತಿದೆ ಎಂದು ರಾಜ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಿನ್ನೆ ಹುಣಸೂರಿಗೆ ಆಗಮಿಸಿದ್ದ ಅವರು, ಪ್ರವಾಸಿ ಮಂದಿರ ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ರಾಜ್ಯ ಸರ್ಕಾರ ಕೊರೋನಾ ನೆಪ ದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತ ಗೊಳಿಸಿ, ಬರೀ ಲೂಟಿ ಯಲ್ಲಿ ನಿರತವಾಗಿದೆ. ಇದರ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಮನವಿ ಮಾಡಿದರೆ, ದಪ್ಪ ಚರ್ಮದ ಈ ಕಿವುಡು ಸರ್ಕಾರ ಸತ್ತಂತಿದೆ. ಅಧಿವೇಶನ ಕರೆಯುವ ಬಗ್ಗೆ ಸಾಕಷ್ಟು ಬಾರಿ ಪತ್ರ ಬರೆದರೂ, ಬಹಿರಂಗ ಹೇಳಿಕೆ ನೀಡಿದರೂ, ಈ ಸರ್ಕಾರ ಸ್ಪಂದಿಸುತ್ತಿಲ್ಲ. ಇದರ ವಿರುದ್ಧ ಪ್ರತಿಭಟನೆ ಮಾಡಲು ಮುಂದಾದರೆ ಕೇಸ್ ಹಾಕುವ ಮೂಲಕ ಅದನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅಭಿವೃದ್ಧಿ ಮರೀಚಿಕೆಯಾಗಿದೆ. ಕಳೆದ ವರ್ಷ ಅತಿವೃಷ್ಟಿ ಯಿಂದ ಲಕ್ಷಾಂತರ ಕುಟುಂಬಗಳು ಸೂರು ಕಳೆದು ಕೊಂಡಿವೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಬಹುತೇಕರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ವರ್ಷವೂ ಸಹ ಅದೇ ಪರಿಸ್ಥಿತಿ ಇದ್ದರೂ, ಸರ್ಕಾರ ಪರಿಹಾರ ನೀಡುವ ಗೋಜಿಗೇ ಹೋಗಿಲ್ಲ. ಅಲ್ಲದೇ ಕೇಂದ್ರ ಸರ್ಕಾರವೂ ಕೂಡ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.
ಕಳೆದ ಬಾರಿ ಆಂಧ್ರದಲ್ಲಿ ತಂಬಾಕು ಬೆಲೆ ಕುಸಿದಾಗ ಅಲ್ಲಿನ ಸರ್ಕಾರ ನೇರವಾಗಿ ತಂಬಾಕು ಖರೀದಿಸಿ ಬೆಳೆಗಾರರ ಸಹಾಯಕ್ಕೆ ನಿಂತಂತೆ ನಮ್ಮ ರಾಜ್ಯದಲ್ಲಿಯೂ ತಂಬಾಕು ಖರೀದಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದ ಅವರು, ಈ ವಿಚಾರದಲ್ಲಿ ಇಲ್ಲಿನ ಸಂಸದರು ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದರು. ಈ ಸರ್ಕಾರ ಅವ್ಯವಹಾರದಲ್ಲಿ ಮುಳುಗಿದ್ದು, ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಹಣದ ಆಮಿಷವೊಡ್ಡಿ ಆಪರೇಷನ್ ಕಮಲ ನಡೆಸಿ ಚುನಾವಣೆ ಗೆಲ್ಲುವುದರಲ್ಲಿ ಬಿಜೆಪಿಯವರು ಸಿದ್ಧಹಸ್ತರೇ ಹೊರತು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಅವರಿಗಿಲ್ಲ. ನನ್ನ ಅವಧಿಯಲ್ಲಿ ಬಡವರಿಗೆ ಅನುಕೂಲವಾಗುವಂತೆ ಸ್ಥಾಪಿಸಿದ ಇಂದಿರಾ ಕ್ಯಾಂಟೀನ್ ಮುಚ್ಚಲು ಈ ಸರ್ಕಾರ ಹವಣಿಸುತ್ತಿದೆ. ವಿದ್ಯಾಸಿರಿ, ಶಾದಿಭಾಗ್ಯ ಮತ್ತಿತರ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು ಆರೋಪಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: