ಮೈಸೂರು

ಹಸಿರು ಪಟಾಕಿ ಮಾರಾಟ ಪರಿಶೀಲನೆ ಹಿನ್ನೆಲೆ ಜೆ.ಕೆ.ಮೈದಾನದ ಗೇಟ್ ಗೆ ಬೀಗ: ಪಟಾಕಿ ಮಾರಾಟಗಾರರು, ಪೊಲೀಸರ ನಡುವೆ ಮಾತಿನ ಚಕಮಕಿ

ಮೈಸೂರು,ನ.13-ದೀಪಾವಳಿ ಹಬ್ಬಕ್ಕೆ ಈ ಬಾರಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಿಡಿಸಲು ಸರ್ಕಾರ ಅನುಮತಿ ನೀಡಿದೆ. ಅದರಂತೆ ನಗರದ ಜೆ.ಕೆ.ಮೈದಾನದಲ್ಲಿನ ಪಟಾಕಿ ಮಾರಾಟ ಮಾಡಲು ಮಾರಾಟಗಾರರು ಸಿದ್ಧತೆ ಮಾಡಿಕೊಂಡು ಇಂದಿನಿಂದ ಪಟಾಕಿ ಮೇಳವನ್ನು ಆರಂಭಿಸಿದ್ದರು.

ಆದರೆ ಪೊಲೀಸರು ಜೆ.ಕೆ.ಮೈದಾನದ ಗೇಟ್ ಗೆ ಬೀಗ ಹಾಕಿದರು. ಈ ವೇಳೆ ಪಟಾಕಿ ಮಾರಾಟಗಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಬಗ್ಗೆ ಸಿಟಿ ಟುಡೆಯೊಂದಿಗೆ ಮಾತನಾಡಿದ ಪಟಾಕಿ ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ಅವರು, ಹಸಿರು ಪಟಾಕಿ ಬಳಕೆಗೆ ಹೈಕೋರ್ಟ್‌ ಷರತ್ತುಬದ್ಧ ಅನುಮತಿ ನೀಡಿದೆ. ಪೊಲೀಸರು ಮಳಿಗೆಗೆ ಭೇಟಿ ನೀಡಿ ಹಸಿರು ಚಿಹ್ನೆ, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (NEERI) ಸಂಸ್ಥೆ ದೃಢೀಕರಣ ಇರುವ ಹಸಿರು ಪಟಾಕಿ ಮಾತ್ರ ಮಾರಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸರ್ಕಾರ, ಪೊಲೀಸರು, ಸ್ಥಳೀಯಾಡಳಿತಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.‌ ಹೀಗಾಗಿ ಪೊಲೀಸರು ಪರಿಶೀಲನೆಗೆ ಬಂದಿದ್ದರು.

ಈ ವೇಳೆ ನಮ್ಮ ಬಳಿ ಸಂಸ್ಥೆಯ ಪ್ರಮಾಣಪತ್ರವಿರಲಿಲ್ಲ. ಪ್ರಮಾಣಪತ್ರವನ್ನು ತಂದು ತೋರಿಸಿ ಮಾರಾಟಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮಾರಾಟ ಮಾಡುತ್ತೇವೆ ಎಂದರು.

ಆರೋಗ್ಯ ಇಲಾಖೆಯಿಂದ ಹಸಿರು ಪಟಾಕಿ ಕುರಿತು ಆದೇಶ ಹೊರಡಿಸಲಾಗಿದೆ. ಹಸಿರು ಪಟಾಕಿ ಎಂದರೇನು? ಎಂಬ ಬಗ್ಗೆ ಕೊಳ್ಳುವವರಲ್ಲಿ ಮಾತ್ರವಲ್ಲದೆ ಮಾರಾಟ ಮಾಡುವವರಿಗೂ ಗೊಂದಲಗಳು ಇರುವುದರಿಂದ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಹಸಿರು ಪಟಾಕಿಗಳು ಪರಿಸರಕ್ಕೆ ಹಾನಿ ಉಂಟು ಮಾಡುವುದಿಲ್ಲ. ಹೀಗಾಗಿ ಈ ಪಟಾಕಿಯಿಂದ ವಾಯು ಮಾಲಿನ್ಯ ಉಂಟಾಗುವುದಿಲ್ಲ ಎಂದು ತಿಳಿಸಿದೆ.

ಹಸಿರು ಪಟಾಕಿಯನ್ನು ಪತ್ತೆ ಹಚ್ಚುವುದು ಹೇಗೆ? ಹಸಿರು ಪಟಾಕಿಯನ್ನು NEERI ಲ್ಯಾಬ್ ಫಾರ್ಮುಲಾದ ಪ್ರಕಾರ ತಯಾರಿಸಲಾಗುತ್ತದೆ. ಇದಕ್ಕೆ ಪೆಟ್ರೋಲಿಯಂ ಆ್ಯಂಡ್ ಎಕ್ಸ್ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ ಪ್ರಮಾಣೀಕರಣ ನೀಡಿದೆ. ಗ್ರಾಹಕರು ಹಸಿರು ಪಟಾಕಿ ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಹಸಿರು ಪಟಾಕಿ ಬಾಕ್ಸ್ ಮೇಲೆ‌ NEERI ಮತ್ತು PESO ಲಾಂಛನ ಇರುತ್ತದೆ. ನಿಮ್ಮ ಮೊಬೈಲ್ನಿಂದ ಪಟಾಕಿ ಬಾಕ್ಸ್ ಮೇಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪರೀಕ್ಷಿಸಬಹುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಹಸಿರು ಪಟಾಕಿ ಎಂದರೆ ಸಾಮಾನ್ಯ ಪಟಾಕಿಗಿಂತ ಕಡಿಮೆ ಮಾಲಿನ್ಯ ಮಾಡುವ ಪಟಾಕಿಯಾಗಿದೆ.

CSIR ಮತ್ತು NEERI ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ಹಸಿರು ಪಟಾಕಿಯನ್ನು ಅಭಿವೃದ್ದಿ ಪಡಿಸಿವೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ 2018ರಲ್ಲಿ ಹಸಿರು ಪಟಾಕಿಗಳನ್ನು ಅಭಿವೃದ್ಧಿ ಮಾಡಲಾಯಿತು. ಲಿಥಿಯಂ, ಲೆಡ್ (ಸೀಸ), ಆರ್ಸೆನಿಕ್ ಮತ್ತು ಬೇರಿಯಂನಂಥ ಹಾನಿಕಾರಕ ಕಮಿಕಲ್​ಗಳನ್ನು ಹಸಿರು ಪಟಾಕಿಯಲ್ಲಿ ಬಳಸುವುದಿಲ್ಲ. (ಎಚ್.ಎನ್, ಎಂ.ಎನ್)

Leave a Reply

comments

Related Articles

error: