ಮೈಸೂರು

ಕೆಲವೇ ನಿಮಿಷಗಳಲ್ಲಿ ಚಿಣ್ಣರ ಮೇಳಕ್ಕೆ ಚಾಲನೆ : ಒಂದು ತಿಂಗಳ ಕಾಲ ರಂಗಾಯಣದಲ್ಲಿ ಚಿಣ್ಣರ ಕಲರವ

ಇನ್ನೇನು ಕೆಲವೇ ನಿಮಿಷಗಳಲ್ಲಿ ರಂಗಾಯಣದ ವನರಂಗದಲ್ಲಿ ಚಿಣ್ಣರ ಕಲರವ ಆರಂಭವಾಗಲಿದೆ. ಇನ್ನೂ ಒಂದು ತಿಂಗಳ ಕಾಲ ಈ ಸ್ಥಳದಲ್ಲಿ ಚಿಣ್ಣರ ಹೆಜ್ಜೆ, ಗೆಜ್ಜೆಯ ಸದ್ದು ರಿಂಗುಣಿಸಲಿದೆ. 1997 ರಲ್ಲಿ ಪ್ರಾರಂಭವಾದ ‘ಚಿಣ್ಣರ ಮೇಳ’ ಇಂದು 20 ನೇ ವರ್ಷಕ್ಕೆ ಕಾಲಿರಿಸಿ ಸಾವಿರಾರು ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದೆ. ದೇಶದಾದ್ಯಂತ ಹೆಸರುವಾಸಿಯಾಗಿರುವ ಮೈಸೂರು ರಂಗಾಯಣ ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಚಿಣ್ಣರ ಮೇಳಕ್ಕೆ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಏಪ್ರಿಲ್ 10 ರಿಂದ ಮೇ 10 ರವರೆಗೆ ನಡೆಯುವ 1 ತಿಂಗಳ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಲ್ಲಿರುವ ಕ್ರಿಯಾಶೀಲತೆಗೆ ನೀರೆರೆದು, ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಪ್ರಯತ್ನಿಸುತ್ತಿದೆ.

ಸೋಮವಾರ ಸಂಜೆ 5 ಗಂಟೆಗೆ ವನರಂಗದಲ್ಲಿ ಚಿಣ್ಣರ ಮೇಳ ಉದ್ಘಾಟನೆಗೊಳ್ಳುತ್ತಿದ್ದು, ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತೆ ಹುಬ್ಬಳ್ಳಿಯ ಸಿಯಾಖೋಡೆ ಚಾಲನೆ ನೀಡಲಿದ್ದಾರೆ. ಕಲಾಶ್ರೀ ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಯೋಗಪಟು ಖುಷಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ,ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ ಹಾಗೂ ಮೇಳದ ಸಂಯೋಜಕ ಮೈಮ್ ರಮೇಶ್ ಉಪಸ್ಥಿತರಿರುತ್ತಾರೆ.

ಈ ಬಗ್ಗೆ ಸಿಟಿ ಟುಡೆಯೊಂದಿಗೆ ಮಾತನಾಡಿದ ಶಿಬಿರದ ನಿರ್ದೇಶಕ ಮೈಮ್ ರಮೇಶ್, ಈ ಬಾರಿ ಚಿಣ್ಣರ ಮೇಳ ನಾವಿನ್ಯತೆಯನ್ನು ಹುಡುಕ ಹೊರಟಿದೆ. ಕಳೆದ ವರ್ಷಕ್ಕಿಂತ ವಿಭಿನ್ನವಾಗಿ ಹೊಸ ಬಗೆಯ ಪ್ರಯೋಗಗಳನ್ನು ನಡೆಸಲು ಸಜ್ಜಾಗಿದೆ. ಮಕ್ಕಳಲ್ಲಿ ಸಮಾನತೆಯ ಬಗ್ಗೆ ಅರಿವು ಮೂಡಿಸಲು ವಚನಗಳ ಮೂಲಕ ಹೊಸ ಪ್ರಯತ್ನ. ಅಲ್ಲದೇ ಸಮಾನತೆಗಾಗಿ ಹೋರಾಡಿದವರ ವೈಯಕ್ತಿಕ ಚಿತ್ರಣಗಳನ್ನು ನಾಟಕಗಳ ಮೂಲಕ ತೋರಿಸುವ ಯತ್ನ, ಪ್ರಾಣಿ-ಪಕ್ಷಿಗಳಲ್ಲಿರುವ ಅನ್ಯೋನ್ಯತೆ, ನಾವೆಲ್ಲರೂ ಒಂದೇ ಎಂಬ ಸಮಾನ ಮನೋಭಾವ ಮಾನವರಲ್ಲೂ ಬರಬೇಕು ಎಂಬ ಉದ್ದೇಶ. ಮುಖ್ಯವಾಗಿ ನಮ್ಮ ನಾಡಿನ ಸಂಸ್ಕೃತಿ-ಸಂಸ್ಕಾರ ಮಕ್ಕಳಲ್ಲಿ ಈಗಿನಿಂದಲೇ ಬೆಳೆಯಬೇಕು ಎಂಬ ಧ್ಯೇಯದಿಂದ ಚಿಣ್ಣರ ಮೇಳ ವೇದಿಕೆ ಸಜ್ಜಾಗಿ ನಿಂತಿದೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ಶಿಬಿರಕ್ಕೆ ಒಟ್ಟು 10 ವೇದಿಕೆಗಳು ಸಿದ್ಧಗೊಂಡಿದ್ದು, ವನರಂಗ ಮತ್ತು ರಂಗಾಯಣದ ಆವರಣದಲ್ಲಿ 3 ವೇದಿಕೆಗಳು, ಶ್ರೀರಂಗ, ಲಂಕೇಶ್ ಗ್ಯಾಲರಿ, ಸುಚಿತ್ರಾ ಆರ್ಟ್ ಗ್ಯಾಲರಿ, ಭಾರತೀರಂಗ ಶಿಕ್ಷಣದ ಶಾಲೆ, ಕಿರು ರಂಗಮಂದಿರದ ಶೆಡ್ ಹಾಗೂ ಅದರ ಪಕ್ಕದ ಸಭಾಂಗಣಗಳನ್ನು ಸಜ್ಜುಗೊಳಿಸಲಾಗಿದೆ. ಬಿಸಿಲಿನ ಬೇಗೆ ಹೆಚ್ಚಾಗಿರುವ ಕಾರಣ ಚಿಕ್ಕಮಕ್ಕಳಿಗೆ ಕಲಾಮಂದಿರದ ಆವರಣವನ್ನು ಬಳಸಿಕೊಳ್ಳುವಂತೆ ಅವಕಾಶ ಕಲ್ಪಿಸಿಕೊಡಲಾಗಿದೆ. ಒಟ್ಟು 10 ತಂಡಗಳಿದ್ದು, ಪ್ರತಿಯೊಂದು ತಂಡಕ್ಕೂ ರಂಗಭೂಮಿ, ಚಿತ್ರಕಲೆ, ಜನಪದ, ಸಂಗೀತ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಲಾವಿದರ ಹೆಸರನ್ನು ಇಡಲಾಗಿದೆ. ನಾಟ್ಯರಾಣಿ ಶಾಂತಲಾ, ಗುಬ್ಬಿವೀರಣ್ಣ, ಅಮರಶಿಲ್ಪಿ ಡಕ್ಕಣಾಚಾರಿ, ಸಂತ ಶಿಶುನಾಳ ಷರೀಪ, ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್, ಪಿಟೀಲು ಚೌಡಯ್ಯ, ರವಿವರ್ಮ, ಸುಬ್ಬಯ್ಯ ನಾಯ್ಡು, ಪಾರ್ಥ ಸುಬ್ಬ ಹಾಗೂ ಕಂಸಾಳೆ ಮಹದೇವ ಎಂಬ ಹೆಸರುಗಳನ್ನು ಇಡಲಾಗಿದ್ದು, ಆ ಮೂಲಕ ಕಲಾವಿದರನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ಇಂದಿನ ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯಬೇಕಾದರೆ ರಂಗಭೂಮಿ ಶಿಕ್ಷಣ ತುಂಬಾ ಅಗತ್ಯವಾಗಿದೆ. ‘ಚಿಣ್ಣರ ಮೇಳ’ ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆಸುವ ಒಂದು ಉತ್ತಮ ವೇದಿಕೆಯಾಗಿ ಹೊರಹೊಮ್ಮುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಮೊಬೈಲ್, ಟಿವಿ ಲೋಕದಲ್ಲೇ ಮುಳುಗಿ ಹೋಗಿರುವ ಇಂದಿನ ಮಕ್ಕಳಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ, ಸಂಸ್ಕೃತಿ, ಅರಿವು, ಸಾಮಾನ್ಯ ಜ್ಞಾನದ ಬಗ್ಗೆ ತಿಳಿಸಿಕೊಡುವ ಮೂಲಕ ಸಮಾನ ಮನೋಭಾವವನ್ನು ಎಲ್ಲರಲ್ಲೂ ಬಿತ್ತಲು ಪ್ರಯತ್ನಿಸುತ್ತಿದ್ದೇವೆ.

ಈಗಾಗಲೇ 425 ಮಕ್ಕಳ ಹೆಸರು ನೋಂದಣಿಯಾಗಿದ್ದು, ಈ ಸಂಖ್ಯೆ 450 ಕ್ಕೆ ಏರುವ ಭರವಸೆಯನ್ನು ವ್ಯಕ್ತಪಡಿಸಿದರು. ಕರ್ನಾಟಕ ಮಾತ್ರವಲ್ಲದೇ ಒರಿಸ್ಸಾ, ಬಾಂಬೆ ಹಾಗೂ ಉತ್ತರ ಪ್ರದೇಶಗಳಿಂದ ಮಕ್ಕಳು ಆಗಮಿಸಿದ್ದಾರೆ. ಶಿರಸಿ, ಶಿವಮೊಗ್ಗ, ಬೆಂಗಳೂರು, ಮಂಗಳೂರು, ಅರಸೀಕೆರೆ, ಬೆಳಗಾಂ, ಧಾರವಾಡಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಬಂದಿದ್ದಾರೆ ಎಂದರು.

ಒಂದು ತಿಂಗಳ ಕಾಲ ನಡೆಯುವ ಈ ಶಿಬಿರದಲ್ಲಿ 7 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದ್ದು, ಬೆಳಿಗ್ಗೆ10 ಗಂಟೆಯಿಂದ ಸಂಜೆ 5 ರವರೆಗೆ ಈ ಮೇಳದಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಕ್ರಿಯಾಶೀಲತೆ, ಚಿತ್ರಕಲೆ, ಕರಕುಶಲತೆ, ಹಾಡು, ನೃತ್ಯ ಹೀಗೆ ಹತ್ತು ಹಲವು ವೈವಿಧ್ಯಮಯ ಪ್ರತಿಭೆಯನ್ನು ಅನಾವರಣಗೊಳಿಸಬಹುದಾಗಿದೆ. ಒಟ್ಟಾರೆ ರಂಗಭೂಮಿ ಬದುಕಿನ ಪ್ರತಿರೂಪ ಎಂದಾದರೆ, ಬದುಕು ಕೂಡ ರಂಗಭೂಮಿಯ ಪ್ರತಿರೂಪವೇ ಸರಿ ಎನ್ನುವುದು ಸತ್ಯದ ಸಂಗತಿ. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: