ಮೈಸೂರು

ಶಿಥಿಲಾವಸ್ಥೆಯಲ್ಲಿ ಅಂಗನವಾಡಿ ಕೇಂದ್ರ : ಮಕ್ಕಳ ಮೇಲೆ ಕುಸಿದು ಬಿದ್ದರೆ ದೇವರೇ ಗತಿ

ಬೈಲಕುಪ್ಪೆ: ಸರ್ಕಾರವು ಶಿಕ್ಷಣಕ್ಕೆ ಆದ್ಯತೆ ನೀಡಿ ಪ್ರತಿ ಮಕ್ಕಳಿಗೂ ಕಡ್ಡಾಯ ಶಿಕ್ಷಣ ಜಾರಿಗೊಳಿಸಿ ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತಿದೆ. ಆದರೆ, ತಾಲ್ಲೂಕಿನ ಮರಳಕಟ್ಟೆ ಗಿರಿಜನ ಹಾಡಿಯ ಮಕ್ಕಳಿಗೆ ಸೂಕ್ತ ಅಂಗನವಾಡಿ ವ್ಯವಸ್ಥೆ ಇಲ್ಲದೆ ವಿಧ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ.

ತಾಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಮರಳುಕಟ್ಟೆ ಹಾಡಿಯಲ್ಲಿ ಗಿರಿಜನರೇ ಹೆಚ್ಚು ವಾಸವಾಗಿದ್ದು ಇಲ್ಲಿ ನೆಪಮಾತ್ರಕ್ಕೆ ಅಂಗನವಾಡಿ ಕೇಂದ್ರವಿದೆ. ಯಾವುದೇ ಮೂಲಭೂತ ಸೌಲಭ್ಯವಿಲ್ಲವಾಗಿದ್ದು ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದು ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂಜರಿಯುವಂತ ಪರಿಸ್ಥಿತಿ ಎದುರಾಗಿದೆ.

ಬಿರುಕು ಬಿಟ್ಟಿರುವ ಕಟ್ಟಡ :

ಈ ಅಂಗನವಾಡಿಯನ್ನು ಬಹಳ ವರ್ಷಗಳ ಹಿಂದೆ ನಿರ್ಮಿಸಿದ್ದು ಕಟ್ಟಡ ಶಿಥಿಲಾವಸ್ಥೆ ತಲುಪಿರುವ ಕಾರಣ ಯಾವ ಕ್ಷಣದಲ್ಲಾದರೂ ಮೇಲ್ಛಾವಣಿ ಕುಸಿದು ಬೀಳುವ ಹಂತದಲ್ಲಿದೆ. ಕೇಂದ್ರದ ಗೋಡೆಗಳು ಬಿರುಕು ಬಿಟ್ಟಿದೆ. ಗೋಡೆಗಳನ್ನು ಕಿಡಿಗೇಡಿಗಳು ಕೊರೆದು ಕಿಂಡಿಗಳನ್ನುನಿರ್ಮಿಸಿದ್ದಾರೆ. ಇದರಿಂದ ಹಾವು ಹಲ್ಲಿಗಳ ಕಾಟವೂ ಹೆಚ್ಚಾಗಿದ್ದು ಮಕ್ಕಳ ಬದಲಾಗಿ ಇವುಗಳೇ ವಾಸಮಾಡುತ್ತಿವೆ. ಈ ಕಾರಣದಿಂದಾಗಿ ಮಕ್ಕಳು ಅಂಗನವಾಡಿಗೆ ಬರುತ್ತಿಲ್ಲ.

ಅಂಗನವಾಡಿಯು ಹಂಚುಗಳಿಂದ ಬಹಳ ಹಳೆಯ ಮರಗಳಿಂದ ನಿರ್ಮಿಸಿರುವ ಕಾರಣ ಹಂಚುಗಳು ಗಾಳಿಮಳೆಗೆ ಬೆಂಡಾಗಿ ಬೀಳುತ್ತಿದ್ದು ಮೇಲ್ಛಾವಣಿಯೂ ಕೂಡ ಬೀಳುವ ಹಂತ ತಲುಪಿದೆ.

ಬಣ್ಣ ಹಚ್ಚಿಲ್ಲ :

ಈ ಅಂಗನವಾಡಿಯ ಪ್ರಾರಂಭದಲ್ಲಿ ಸುಣ್ಣಬಣ್ಣವನ್ನು ಬಳಿದಿದ್ದಾರೆ. ಆದರೆ ಇದುವರೆಗೂ ಯಾವುದೇ ಬಣ್ಣವನ್ನು ಕಂಡಿಲ್ಲ. ಇದರಿಂದಾಗಿ ಅಂಗನವಾಡಿ ಬದಲಾಗಿ ಯಾವುದೋ ಪ್ರಾಣಿಗಳನ್ನು ಕಟ್ಟುವ ವಾಸಸ್ಥಾನವೆಂಬತೆ ಕಾಣುತ್ತಿದೆ.

ಪೌಷ್ಠಿಕ ಆಹಾರದ ಕೊರತೆ :

ಈ ಅಂಗನವಾಡಿಯ ದುಸ್ಥಿತಿಯನ್ನು ಕಂಡರೆ ಮಕ್ಕಳಿಗೆ ಸಿಗುವ ಪೌಷ್ಠಿಕ ಆಹಾರವೂ ಕೂಡ ಸಿಗುತ್ತಿಲ್ಲವೆಂಬಂತಾಗಿದ್ದು ಮಕ್ಕಳು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಇದು ತಾಲ್ಲೂಕಿನ ಗಡಿಗ್ರಾಮವಾದ್ದರಿಂದ ಇದರ ಕಡೆ ಗಮನವಿಲ್ಲದಂತಾಗಿದೆ.

ಅನೈರ್ಮಲ್ಯದ ತಾಂಡವ :

ಗ್ರಾಮದಲ್ಲಿ ಸೂಕ್ತವಾದ ಚಂರಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರೆಲ್ಲಾ ಅಂಗನವಾಡಿ ಕೇಂದ್ರದ ಮುಂದೆ ಬಂದು ನಿಲ್ಲುವುದರಿಂದ ತ್ಯಾಜ್ಯಗಳು ಕೊಳೆತು ಗಬ್ಬು ನಾರುತ್ತಿದ್ದು ಇದರಿಂದ ಸೊಳ್ಳೆ ನೊಣಗಳ ತಾಣವಾಗಿ ಪರಿಣಮಿಸಿದೆ. ಸಾಂಕ್ರಾಮಿಕ ರೋಗ ಹರಡಬಹುದೆಂಬ ಭೀತಿಯಲ್ಲಿದ್ದು, ಪ್ರತಿನಿತ್ಯ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತಿದ್ದಾರೆ.

ಹೀಗೆ ಅನೇಕ ಸಮಸ್ಯೆಗಳ ನಡುವೆ ನೆಪಮಾತ್ರಕ್ಕೆ ಹಾಡಿಯಲ್ಲಿ ಅಂಗನವಾಡಿ ಕೇಂದ್ರವನ್ನು ನಡೆಸುತ್ತಿದ್ದು ಇದನ್ನು ಸರಿಪಡಿಸಿ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲವೆಂಬುದು ಇಲ್ಲಿನ ಹಾಡಿಯ ಜನರ ಅಳಲಾಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಅಂಗನವಾಡಿಗೆ ಮರುಜೀವ ಕಲ್ಪಿಸುವರೇ ಎಂದು ಕಾದು ನೋಡಬೇಕಾಗಿದೆ.

ಆರ್.ಬಿ.ಆರ್/ಎನ್‍.ಬಿ.ಎನ್

Leave a Reply

comments

Related Articles

error: