ಮೈಸೂರು

ಯುವಕರು ಹೊಸ ಹೊಸ ಸಂಶೋಧನೆಗಳನ್ನು ನಡೆಸಬೇಕು : ಡಾ.ವಸುದೇವ್ ಕೆ.ಆತ್ರೆ

ಮೈಸೂರು ಬನ್ನೂರು ರಸ್ತೆಯಲ್ಲಿರುವ ವಿದ್ಯಾವಿಕಾಸ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಎರಡು ದಿನಗಳ ಮೆಮ್ಸ್ ಮತ್ತು ಮೈಕ್ರೋಸಿಸ್ಟಂ ವಿಜ್ಞಾನ ಕಾರ್ಯಾಗಾರಕ್ಕೆ ಪದ್ಮಭೂಷಣ ವಿಜ್ಞಾನಿ ಡಾ.ವಸುದೇವ್ ಕೆ.ಆತ್ರೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇಂದು ತಂತ್ರಜ್ಞಾನ ಎಷ್ಟರ ಮಟ್ಟಿಗೆ ನಮ್ಮನ್ನು ಆವರಿಸಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಪ್ರಕೃತಿ. ಪ್ರತಿಯೊಂದು ಸಣ್ಣ ಸಣ್ಣ ವಸ್ತುಗಳ ಉತ್ಪಾದನೆಯಲ್ಲೂ ತಂತ್ರಜ್ಞಾನದ ಜೊತೆಗೆ ಪ್ರಕೃತಿಯ ಪ್ರೇರಣೆಯೂ ಇದೆ. ಪ್ರಕೃತಿಯ ಪ್ರೇರಣೆ ಪಡೆದು ಹೇಗೆ ತಂತ್ರಾಂಶಗಳನ್ನು ಆವಿಷ್ಕರಿಸಬಹುದು ಎಂಬುದನ್ನು ಚಿಂತಿಸಬೇಕಿದೆ. ಇಂದು ತಂತ್ರಜ್ಞಾನವನ್ನು ಬಿಟ್ಟು ಮನುಷ್ಯ ಬದುಕಲು ಸಾಧ್ಯವಿಲ್ಲ. ದಿನಬಳಕೆಯ ವಸ್ತುಗಳು, ವೈಜ್ಞಾನಿಕ ಉಪಕರಣಗಳು, ಕೃಷಿ ಉಪಕರಣಗಳು ಸೇರಿದಂತೆ ಪ್ರತಿಯೊಂದು ವಸ್ತುಗಳ ಉತ್ಪಾದನೆಯಲ್ಲೂ ತಂತ್ರಜ್ಞಾನದ ಕೊಡುಗೆ ಅಪಾರವಾಗಿದ್ದು, 21ನೇ ಶತಮಾನ ತಂತ್ರಜ್ಞಾನ ಯುಗವಾಗಿದೆ ಎಂದು ಹೇಳಿದರು.
ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಬೆಳವಣಿಗೆ ಕಡಿಮೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಏರುಮುಖವಾಗಿ ಸಾಗುತ್ತಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಿಂದ ಭಾರತದಲ್ಲೇ ವಸ್ತುಗಳನ್ನು ತಯಾರಿಸಿ ಇತರೆ ದೇಶಗಳಿಗೆ ಮಾರಾಟ ಮಾಡುವ ಬೆಳವಣಿಗೆ ಆರಂಭವಾಗಿದೆ. ಸಾರ್ವಜನಿಕರು ಸಹ ಭಾರತದ ವಸ್ತುಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಚೀನಾ ವಸ್ತುಗಳು ವಿಶ್ವ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿದ್ದು ಭಾರತ ಆ ಮಟ್ಟಕ್ಕೆ ಬೆಳೆಯಬೇಕಿದೆ. ಯುವಕರು ಹೊಸ ಹೊಸ ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ದೇಶದ ಆರ್ಥಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಐಎಸ್‍ಎಸ್‍ಎಸ್ ಅಧ್ಯಕ್ಷ ಪ್ರೊ.ಎಸ್.ಗೋಪಾಲಕೃಷ್ಣ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಛೇರ್ಮನ್ ಹಾಗೂ ಶಾಸಕ ವಾಸು, ಕಾರ್ಯದರ್ಶಿ ಕವೀಶ್ ಗೌಡ, ಪ್ರಾಂಶುಪಾಲ ಡಾ.ಎಂ.ರವಿಶಂಕರ್, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಅಧ್ಯಾಪಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: