ಕರ್ನಾಟಕಪ್ರಮುಖ ಸುದ್ದಿ

ಉಗ್ರವಾದಿ ಚಟುವಟಿಕೆಯಲ್ಲಿ ಬಂಧಿತರಾದವರ ಪೈಕಿ ಮೂವರ ಆರೋಪ ಸಾಬೀತು : 3ನೇ ಹೆಚ್ಚುವರಿ ನ್ಯಾಯಾಲಯ ತೀರ್ಪು

ಮಂಗಳೂರು: 2008ರಲ್ಲಿ ಮಂಗಳೂರಿನ ವಿವಿಧೆಡೆ ಉಗ್ರವಾದಿ ಚಟುವಟಿಕೆ ಆರೋಪದಲ್ಲಿ ಬಂಧಿತರಾಗಿದ್ದವರ ಪೈಕಿ ಮೂವರ ಮೇಲಿನ ಆರೋಪ ಸಾಬೀತಾಗಿದೆ.ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ದೋಷಿಗಳೆಂದು ಮಹತ್ವದ ತೀರ್ಪು ನೀಡಿದ್ದು, ನಾಲ್ವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ಏಪ್ರಿಲ್ 12ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಸೈಯದ್ ಮಹಮ್ಮದ್ ನೌಶಾದ್,ಅಹ್ಮದ್ ಬಾವಾ ಅಬೂಬಕ್ಕರ್, ಫಕೀರ್ ಅಹ್ಮದ್ ಎಂಬ ಮೂವರ ಆರೋಪ ಸಾಬೀತಾಗಿದೆ. ಇದೇ ವೇಳೆ ಸಾಕ್ಷ್ಯಾಧಾರಗಳ ಕೊರತೆಯಿಂದ ಶಬೀರ್ ಭಟ್ಕಳ, ಅಹ್ಮದ್ ಅಲಿ, ಜಾವೇದ್ ಅಲಿ ಮತ್ತು ಉಮರ್ ಫಾರೂಕ್ ಅವರನ್ನು ಕೋರ್ಟ್ ಆರೋಪದಿಂದ ಖುಲಾಸೆಗೊಳಿಸಿದೆ.

2008ರಲ್ಲಿ ಮುಂಬೈ ಮತ್ತು ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮಂಗಳೂರಿನ ಉಳ್ಳಾಲದ ಮುಕ್ಕಚ್ಚೇರಿ, ಚೆಂಬುಗುಡ್ಡೆ, ಹಳೆಯಂಗಡಿ, ಪಾಂಡೇಶ್ವರದ ಸುಭಾಷ್‍ ನಗರದಿಂದ ಏಳು ಮಂದಿಯನ್ನು ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿಸಿದ್ದರು. ಆ ಬಳಿಕ ದೇಶ ವಿರೋಧಿ ಚಟುವಟಿಕೆ, ವಿಧ್ವಂಸಕ ಕೃತ್ಯಕ್ಕೆ ಸಂಚು, ಸ್ಪೋಟಕ ತಯಾರಿಕೆ ಆರೋಪದಲ್ಲಿ ಏಳು ಮಂದಿ ವಿರುದ್ಧ ಕೇಸು ದಾಖಲಾಗಿತ್ತು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: