ದೇಶಪ್ರಮುಖ ಸುದ್ದಿ

ನರೇಂದ್ರ ಮೋದಿ ನೇತೃತ್ವದಲ್ಲೇ 2019ರ ಚುನಾವಣೆ ಎದುರಿಸಲು ಎನ್‍ಡಿಎ ಅಂಗಪಕ್ಷಗಳ ನಿರ್ಣಯ

ನವದೆಹಲಿ : 2019 ರ ಲೋಕಸಭಾ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲೇ ಎದುರಿಸಲು ಎನ್‍ಡಿಎ ಮೈತ್ರಿಕೂಟ ಪಕ್ಷಗಳು ನಿರ್ಣಯಿಸಿವೆ.

ಸೋಮವಾರ ರಾತ್ರಿ ಎನ್‍ಡಿಎ ಅಂಗಪಕ್ಷಗಳ ನಾಯಕರಿಗೆ ಏರ್ಪಡಿಸಲಾಗಿದ್ದ ಭೋಜನ ಕೂಟದ ಭಾಗವಾಗಿ ನಡೆದ ಸುಮಾರು 4 ಗಂಟೆಗಳ ಸುದೀರ್ಘ ಸಭೆಯ ನಂತರ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಬಿಜೆಪಿ ವಿರುದ್ಧ ಇತ್ತೀಚೆಗೆ ವಾಗ್ದಾಳಿ ನಡೆಸುತ್ತಿರುವ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ ಷಾ ನಡೆಸಿದ 20 ನಿಮಿಷಗಳ ಮಾತುಕತೆ ಯಶಸ್ವಿಯಾಗಿದ್ದು, ಮೋದಿ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲು ಉದ್ಧವ್ ಅವರೂ ಸಮ್ಮತಿಸಿದ್ದಾರೆ. ಇದರ ಜೊತೆಗೆ ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರದಲ್ಲಿ ಉದ್ಭವಿಸಿರುವ ಗೊಂದಲಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಎನ್‍ಡಿಎ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಸರ್ಕಾರವು ಬಡವರ ಕಷ್ಟ ನೀಗಿಸುವ ನಿಟ್ಟಿನಲ್ಲಿ ಹಲವಾರು ಪ್ರಗತಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದೇಶದ ಬಡಜನತೆ ಎನ್‍ಡಿಎ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಸಚಿವರು ಮತ್ತು ಎನ್‍ಡಿಎ ನಾಯಕರು ಚಿಂತಿಸಬೇಕು ಎಂದರು.

(ಎನ್‍.ಬಿ.ಎನ್)

Leave a Reply

comments

Related Articles

error: