ಮೈಸೂರು

ಶ್ರಮ ಸಂಸ್ಕೃತಿ ರಂಗ ಶಿಬಿರ ಚಾಲನೆಗೆ ಕ್ಷಣಗಣನೆ

ಇಂದಿನ ಸಮಾಜದಲ್ಲಿರುವ ಸಮಸ್ಯೆಗಳನ್ನು ಯುವಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಹಾಗೂ ರಂಗಭೂಮಿಯ ಆಯಾಮಗಳನ್ನು ಕಲಿಸಿಕೊಡಲು ‘ನೆಲೆ-ಹಿನ್ನೆಲೆ’ ರಂಗ ಸಂಸ್ಥೆಯು ಒಂದು ತಿಂಗಳ ರಂಗ ತರಬೇತಿ ಶಿಬಿರವನ್ನು ಆಯೋಜಿಸಿದೆ.

ಈ ಶಿಬಿರವನ್ನು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಜನಪದ ವಿಭಾಗದ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಮಂಗಳವಾರ ಸಂಜೆ 4 ಗಂಟೆಗೆ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವಿದ್ದು, ರೈತ ಸಂಘದ ಅಧ‍್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಚಾಲನೆ ನೀಡಲಿದ್ದಾರೆ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೀತಿ ಶ್ರೀಮಂಧರ್ ಕುಮಾರ್, ಜನಪದ ವಿಭಾಗದ ಮುಖ್ಯಸ‍್ಥ ನಂಜಯ್ಯ ಹೊಂಗನೂರು, ಶಿಬಿರದ ನಿರ್ದೇಶಕ ಜನಾರ್ದನ (ಜೆನ್ನಿ) ಉಪಸ್ಥಿತರಿರುತ್ತಾರೆ.

ಈ ಬಗ್ಗೆ ‘ಸಿಟಿ ಟುಡೆ’ಯೊಂದಿಗೆ ಮಾತನಾಡಿದ ಶಿಬಿರದ ನಿರ್ದೇಶಕ ಜನಾರ್ದನ (ಜೆನ್ನಿ) ಯುವಜನತೆ ಮತ್ತು ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ಈ ಶಿಬಿರವನ್ನು ನಡೆಸಲಾಗುತ್ತಿದೆ. ‘ಉಳುವ ಯೋಗಿ’ ಎಂಬ ವಿಷಯದ ಆಧಾರದಲ್ಲಿ ಶ್ರಮ ಸಂಸ್ಕೃತಿಯನ್ನು ಕೇಂದ್ರ ವಸ್ತುವಾಗಿರಿಸಿಕೊಳ್ಳಲಾಗಿದೆ. ಶ್ರಮ ರಹಿತ ಜೀವನ ಬಯಸುವ ಇಂದಿನ ಜನತೆಗೆ ಶ್ರಮವಿಲ್ಲದೇ ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬ ಅಂಶವನ್ನು ಮನವರಿಕೆ ಮಾಡಿಕೊಡುವ ಉದ್ದೇಶ ನಮ್ಮದಾಗಿದೆ. ಶ್ರಮ ಸಂಸ್ಕೃತಿ ಮತ್ತು ಸರಳ ಜೀವನ ಸಾರ್ಥಕ ಮತ್ತು ಅರ್ಥಪೂರ್ಣ ಬದುಕನ್ನು ಕಟ್ಟಿಕೊಡುತ್ತವೆ. ಶ್ರಮ ರಹಿತ ಬದುಕು ಸಮಾಜವನ್ನು ಅಡ್ಡದಾರಿಗೆ ಎಳೆಯುತ್ತದೆ. ಸ್ವಾರ್ಥ, ಮೋಸ, ಅನ್ಯಾಯದ ದಾರಿಗೆ ಎಡೆ ಮಾಡಿಕೊಡುತ್ತದೆ. ಹೀಗಾಗಿ ಯವಕರಲ್ಲಿ ಅರಿವನ್ನು ಮೂಡಿಸಲು ಈ ಶಿಬಿರದ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಒಟ್ಟು 60 ಜನ ಯುವಕ-ಯುವತಿಯರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಡಿಕೇರಿ ಹಾಗೂ ಕೆ.ಆರ್.ನಗರದಿಂದ ಶಿಬಿರಾರ್ಥಿಗಳು ಆಗಮಿಸಿದ್ದಾರೆ. ಮೈಸೂರಿನ ವಿದ್ಯಾವರ್ಧಕ ಕಾಲೇಜು, ಮಹಾರಾಜ, ಮಹಾಜನ ಹಾಗೂ ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಇದು ಉಚಿತ ಶಿಬಿರವಾಗಿದ್ದು, ವಿದ್ಯಾರ್ಥಿಗಳಿಗೆ ರಂಗಭೂಮಿಯ ವಿವಿಧ ಆಯಾಮಗಳಾದ ನಾಟಕ, ಅಭಿನಯ, ನಿರ್ದೇಶನ, ಮೇಕಪ್, ಮೈಮ್, ವಸ್ತ್ರಾಲಂಕಾರ, ಸ್ಟೇಜ್ ಡಿಸೈನ್ ಇನ್ನೂ ಮೊದಲಾದ ಅಂಶಗಳನ್ನು ಕ್ರಿಯಾತ್ಮಕವಾಗಿ ಪರಿಚಯಿಸಲಾಗುತ್ತದೆ ಎಂದು ಹೇಳಿದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: