
ಪ್ರಮುಖ ಸುದ್ದಿಮನರಂಜನೆ
ಯೂಟ್ಯೂಬರ್ ವಿರುದ್ಧ 500 ಕೋಟಿ ರೂಪಾಯಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡಿದ ಬಾಲಿವುಡ್ ಆ್ಯಕ್ಷನ್ ಕಿಂಗ್
ದೇಶ(ಮುಂಬೈ)ನ.20:- ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂಬ ಕಾರಣಕ್ಕೆ ನಟ ಅಕ್ಷಯ್ ಕುಮಾರ್ ಬಿಹಾರ ಮೂಲದ ಯೂಟ್ಯೂಬರ್ ವಿರುದ್ಧ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎನ್ನಲಾಗಿದೆ.
ನವೆಂಬರ್ 17ರಂದು ರಶೀದ್ ಸಿದ್ದಿಕಿ ಎಂಬವರ ಎಫ್ ಎಫ್ ನ್ಯೂಸ್ ಯುಟ್ಯೂಬ್ ಚಾನೆಲ್ ಗೆ ನೋಟಿಸ್ ಕಳಿಸಲಾಗಿದೆ ಎನ್ನಲಾಗಿದೆ. 25 ವರ್ಷದ ರಶೀದ್ ಸಿದ್ದಿಕಿ ಬಿಹಾರದಲ್ಲಿ ವಾಸಿಸುತ್ತಿರುವ ಸಿವಿಲ್ ಎಂಜಿನಿಯರ್ ಎಂದು ಹೇಳಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣದಲ್ಲಿ, ಅವರು ವಿವಿಧ ವೀಡಿಯೊಗಳ ಮೂಲಕ ಅಕ್ಷಯ್ ಕುಮಾರ್ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು. ಅಂತಹ ಒಂದು ವೀಡಿಯೊದಲ್ಲಿ, ಅಕ್ಷಯ್ ಕುಮಾರ್ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿಗೆ ಕೆನಡಾಕ್ಕೆ ಪಲಾಯನ ಮಾಡಿಸುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿದ್ದರು ಎನ್ನಲಾಗಿದೆ.
ಅಷ್ಟೇ ಅಲ್ಲ, ಅಕ್ಷಯ್ ಕುಮಾರ್ ಸುಶಾಂತ್ ಸಿಂಗ್ ರಜಪೂತ್ ಗೆ ಎಂ.ಎಸ್. ಧೋನಿಯಂತಹ ದೊಡ್ಡ ಚಿತ್ರ ಸಿಗುವುದಕ್ಕೂ ಅತೃಪ್ತರಾಗಿದ್ದರು ಎಂದು ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಇಷ್ಟೇ ಅಲ್ಲದೇ ಅಕ್ಷಯ್ ಕುಮಾರ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮುಂಬೈ ಪೊಲೀಸರನ್ನು ರಹಸ್ಯವಾಗಿ ಭೇಟಿ ಮಾಡಿದ್ದಾರೆ ಎಂದೂ ಕೂಡ ರಶೀದ್ ಹೇಳಿದ್ದರು ಎನ್ನಲಾಗಿದೆ.
ಶಿವಸೇನಾ ಲೀಗಲ್ ಸೆಲ್ ವಕೀಲ ಧರ್ಮೇಂದ್ರ ಮಿಶ್ರಾ ಅವರು ಇತ್ತೀಚೆಗೆ ರಶೀದ್ ಸಿದ್ದಿಕಿ ವಿರುದ್ಧ ಮೊಕದ್ದಮೆ ಹೂಡಿದ್ದು ಗಮನಾರ್ಹವಾಗಿದೆ. ಇದರ ಆಧಾರದ ಮೇಲೆ ಬಾಂದ್ರಾ ಪೊಲೀಸರು ರಶೀದ್ ಸಿದ್ದಿಕಿ ಅವರನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಮತ್ತು ಮುಂಬೈ ಪೊಲೀಸರನ್ನು ದೂಷಿಸಿದ್ದಕ್ಕಾಗಿ ಬಂಧಿಸಿದ್ದರು. ನಂತರ ರಶೀದ್ ನ್ಯಾಯಾಲಯದಿಂದ ಜಾಮೀನು ಪಡೆದರು ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)