ಮೈಸೂರು

ಕಬ್ಬಿನ ಎಫ್ ಆರ್ ಪಿ ಬೆಲೆ ಏರಿಸಿ, ವಿದೇಶದಿಂದ ಸಕ್ಕರೆ ಆಮದಿಗೆ ಅನುಮತಿ ನೀಡದಿರಿ : ಕುರುಬೂರು ಶಾಂತಕುಮಾರ್ ಒತ್ತಾಯ

ದೇಶದ ಕಬ್ಬು ಬೆಳೆಗಾರರಿಗೆ 2ವರ್ಷಗಳಿಂದ ಕಬ್ಬಿನ ಎಫ್ ಆರ್ ಪಿ ಬೆಲೆ ಏರಿಸದೇ ರೈತರಿಗೆ ದ್ರೋಹ ಬಗೆದು ಕಬ್ಬಿನ ಬೆಳೆ ಕಡಿಮೆಯಾದ ಕಾರಣ ವಿದೇಶದಿಂದ ಐದು ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಯಾವುದೇ ಕಾರಣಕ್ಕೂ ಆಮದು ಅನುಮತಿಯನ್ನು ನೀಡದೇ ದೇಶದ ಕಬ್ಬು ಬೆಳೆಗಾರ ರೈತರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಮೈಸೂರಿನ ಜಲದರ್ಶಿನಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶ ಸರ್ಕಾರ 36ಸಾವಿರ ಕೋಟಿ ರೈತರ ಸಾಲ ಮನ್ನಾಮಾಡಿ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಮೂರು ವರ್ಷಗಳ ಸತತ ಬರಗಾಲವಿದ್ದರೂ, ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಮಾಂಸದ ಅಂಗಡಿಗಳನ್ನು ಆರಂಭಿಸುವವರಿಗೆ 1.25ಲಕ್ಷ ರೂ.ಪ್ರೋತ್ಸಾಹಧನ ನೀಡಲು ಮುಂದಾಗಿರುವುದು ಸರ್ಕಾರದ ಹಾಸ್ಯಾಸ್ಪದ ವರ್ತನೆಯಾಗಿದೆ ಎಂದರು. ರಾಜ್ಯದ ಯಾವುದೇ ಸಚಿವರು ಹಳ್ಳಿಗೆ ಬಂದಾಗ ಸಾಲಮನ್ನಾಕ್ಕಾಗಿ ಒತ್ತಾಯಿಸಿ ಘೇರಾವ್ ನಡೆಸಲು ಮುಂದಾಗಬೇಕಿದೆ ಎಂದು ತಿಳಿಸಿದರು.

ಗುಜರಾತ್ ರಾಜ್ಯದ ಗಾನದೇವಿ ಸಕ್ಕರೆ  ಸಹಕಾರಿ ಕಾರ್ಖಾನೆ 2016-17ನೇ ಸಾಲಿನಲ್ಲಿ ಟನ್ ಕಬ್ಬಿಗೆ ರೂ.4441 ರೂ. ನೀಡಿ ದೇಶದಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಮಾದರಿಯಾಗಿದೆ. ಈ ಭಾಗದ ಸಕ್ಕರೆ ಕಾರ್ಖಾನೆಯವರು ಕಟಾವು ಸಾಗಾಣಿಕೆ ವೆಚ್ಚ ಕಳೆದು 1800ರೂ. ನೀಡಿವೆ ಎಂದರು.   ಇದೇ ಸಂದರ್ಭ ಕಾರ್ಯಕ್ರಮದ ಕುರಿತು ವಿವರ ನೀಡಿದ ಅವರು  ಏ.15ರಂದು ಬೆಳಿಗ್ಗೆ 11ಗಂಟೆಗೆ ಜೆ.ಎಸ್.ಎಸ್.ರಾಜೇಂದ್ರಭವನದಲ್ಲಿ ತೋಟಗಾರಿಕೆ ವತಿಯಿಂದ ರೈತರ ಕಾರ್ಯಾಗಾರ –ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇಸ್ರೇಲ್ ದೇಶದ ಕೃಷಿ ತಜ್ಞ ಕ್ಲೀಫ್ ಲವ್ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೇವರಾಜ್, ನಾಗರಾಜ್, ರವಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: