ದೇಶಪ್ರಮುಖ ಸುದ್ದಿ

ಇಂದು ತಮಿಳುನಾಡಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

ನವದೆಹಲಿ,ನ.21-ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ. ರಾಜಕೀಯವಾಗಿ ಶಾ ಅವರ ಭೇಟಿ ಬಹಳ ಮಹತ್ವ ಪಡೆದುಕೊಂಡಿರುವುದಲ್ಲದೆ, ಕುತೂಹಲ ಕೆರಳಿಸಿದೆ.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಬಿಜೆಪಿ ಸಂಘಟನೆಗೆ ಒತ್ತು ನೀಡುವುದಕ್ಕಿಂತಲೂ ಹೆಚ್ಚಾಗಿ ಹೊಸ ಪಕ್ಷ ಸ್ಥಾಪಿಸಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿ ಅವರ ಪುತ್ರ ಎಂ.ಕೆ.ಅಳಗಿರಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಿರುವುದರಿಂದ ಅಳಗಿರಿಯವರ ಹೊಸ ಪಕ್ಷದ ಆಶ್ರಯದಲ್ಲಿ ಬಿಜೆಪಿ ಬೇರು ಬಿಡುವಂತೆ ಮಾಡಬಹುದೆಂಬ ಲೆಕ್ಕಾಚಾರದೊಂದಿಗೆ ಈ ಕಸರತ್ತು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಕರುಣಾನಿಧಿ ಅವರ ಹಿರಿಯ ಪುತ್ರ ಹಾಗೂ ಕೇಂದ್ರದ ಮಾಜಿ ಸಚಿವ ಎಂ.ಕೆ. ಅಳಗಿರಿ ಮಧುರೈ ಪ್ರಾಂತ್ಯದಲ್ಲಿ ಪ್ರಭಾವ ಹೊಂದಿದ್ದಾರೆ‌. ಮಧುರೈ ಪ್ರಾಂತ್ಯದಲ್ಲಿ ಅವರು ತಟಸ್ಥರಾಗಿದ್ದ ಕಾರಣ ಎಐಎಡಿಎಂಕೆ ಹೆಚ್ಚು ಸ್ಥಾನಗಳಿಸಲು ಸಾಧ್ಯವಾಯಿತು.

ಈಗ ಅವರು‌ ಹೊಸ ರಾಜಕೀಯ ಪಕ್ಷ ಸ್ಥಾಪಿಸಿದರೆ ಎಂ.ಕೆ.‌ ಸ್ಟಾಲಿನ್ ಅವರ ಡಿಎಂಕೆ ಪಕ್ಷದ ಮತಗಳು ಛಿದ್ರಗೊಳ್ಳುತ್ತವೆ. ಅದರಿಂದ ಬಿಜೆಪಿಗೆ ಲಾಭವಾಗಬಹುದು.‌ ಜೊತೆಗೆ ಗೆಲ್ಲುವ ಶಕ್ತಿ ಇಲ್ಲದಿರುವ ನಮ್ಮ ಪಕ್ಷವು ಅಳಗಿರಿಯವರ ಹೊಸ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಚಿಂತನೆ ಬಿಜೆಪಿ ನಾಯಕರದ್ದಾಗಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: