ಕ್ರೀಡೆ

ಲಂಕಾ ಪ್ರೀಮಿಯರ್ ಲೀಗ್ ಗೆ ಕೊರೋನಾ ಕರಿನೆರಳು : ಸ್ಟಾರ್ ಆಟಗಾರರಿಗೆ ಕೊರೋನಾ ಪಾಸಿಟಿವ್

ದೇಶ(ನವದೆಹಲಿ)ನ.21:- ಲಂಕಾ ಪ್ರೀಮಿಯರ್ ಲೀಗ್ ಸಂಘಟಕರಿಗೆ ಸಮಸ್ಯೆಗಳು ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ನವೆಂಬರ್ 26 ರಿಂದ ಆರಂಭವಾಗಲಿರುವ ಎಲ್ ಪಿ ಎಲ್ ನಲ್ಲಿ ಪಾಲ್ಗೊಳ್ಳಲಿರುವ ಪಾಕಿಸ್ತಾನದ ವೇಗದ ಬೌಲರ್ ಸೊಹೈಲ್ ತನ್ವೀರ್ ಮತ್ತು ಕೆನಡಾದ ಬ್ಯಾಟ್ಸ್ಮನ್ ರವೀಂದರ್ ಪಾಲ್ ಸಿಂಗ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಇದಕ್ಕೂ ಮೊದಲು ಕ್ರಿಸ್ ಗೇಲ್, ರವಿ ಬೋಪಾರ ಸೇರಿದಂತೆ ಅನೇಕ ಆಟಗಾರರು ಎಲ್ ಪಿಎಲ್ ನ ಮೊದಲ ಸೀಸನ್ ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಕ್ಯಾಂಡಿ ಟಸ್ಕರ್ಸ್ ತಂಡದ ಭಾಗವಾದ ತನ್ವೀರ್ ಮತ್ತು ಕೊಲಂಬೊ ಕಿಂಗ್ಸ್ ರವಿಂದರ್ ಪಾಲ್ ಅವರು ಟಿ 20 ಪಂದ್ಯಾವಳಿಗಾಗಿ ಶ್ರೀಲಂಕಾ ತಲುಪಿದ ವೇಳೆ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ಪಾಕಿಸ್ತಾನದ ವಹಾಬ್ ರಿಯಾಜ್ ಮತ್ತು ಇಂಗ್ಲೆಂಡ್ನ ಲಿಯಾಮ್ ಪ್ಲಂಕೆಟ್ ಹಿಂದೆ ಸರಿಯುತ್ತಿದ್ದಂತೆ ತನ್ವೀರ್ ಗೆ ಜಾಗ ನೀಡಲಾಗಿತ್ತು.
ತನ್ವೀರ್ ಮತ್ತು ರವೀಂದರ್ಪಾಲ್ ಕನಿಷ್ಠ ಎರಡು ವಾರಗಳ ಕಾಲ ಹೊರಗುಳಿಯಲಿದ್ದಾರೆ. ತನ್ವೀರ್ ಬದಲಿಗೆ ಇನ್ನೊಬ್ಬ ಆಟಗಾರನ ಅಗತ್ಯವಿದೆ ಎಂದು ಟಸ್ಕರ್ಸ್ ತರಬೇತುದಾರ ಹಸನ್ ತಿಲಕರತ್ನೆ ಹೇಳಿದ್ದಾರೆ. ಶ್ರೀಲಂಕಾದ ಮಾಜಿ ಬ್ಯಾಟ್ಸ್ಮನ್, “ನಾವು ಫ್ರ್ಯಾಂಚೈಸಿ ಮಾಲೀಕರೊಂದಿಗೆ ಮಾತನಾಡಬೇಕಿದೆ ಮತ್ತು ತನ್ವೀರ್ ಬದಲಿಗೆ ಯಾರನ್ನಾದರೂ ಹುಡುಕಬೇಕಾಗಿದೆ” ಎಂದು ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: