ಮೈಸೂರು

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದೆ : ಕಾಂ.ಮಾರುತಿ ಮಾನ್ಪಡೆ ಆರೋಪ

ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ರೈತರ ಆತ್ಮಹತ್ಯೆ ಪ್ರಮಾಣ ಅಧಿಕವಾಗಿದೆ. ಉಳುವವನಿಗೆ ಭೂಮಿ ನೀಡುವ ಬದಲು ಉಳ್ಳವನಿಗೆ ಭೂಮಿ ನೀಡಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದು ರೈತರಿಗೆ ಮಹಾ ದ್ರೋಹವೆಸಗುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ  ಕಾಂ.ಮಾರುತಿ ಮಾನ್ಪಡೆ ಆರೋಪಿಸಿದರು.

ಮಂಗಳವಾರ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರಕ್ಕೆ ಆಗ್ರಹಿಸಿ, ಬರಪರಿಹಾರ ಸಮರ್ಪಕ ಜಾರಿ ಹಾಗೂ ರೈತರ ಎಲ್ಲಾ ರೀತಿಯ ಸಾಲಮನ್ನಾ ಮಾಡಲು ಒತ್ತಾಯಿಸಿ ಆಯೋಜಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ದೇಶದ ಪ್ರಧಾನಿಯಾದ ಬಳಿಕ ಶೇ.30ರಷ್ಟು ರೈತರ ಆತ್ಮಹತ್ಯೆ ಹೆಚ್ಚಾಗಿದೆ. 2001ರಲ್ಲಿ ಶೇ.64ರಷ್ಟಿದ್ದ ರೈತರ ಸಂಖ್ಯೆ ಇಂದು ಶೇ.49ಕ್ಕೆ ಇಳಿದಿದೆ. ಉಳುವವನಿಗೆ ಕನಿಷ್ಟ 1 ಎಕರೆಯನ್ನಾದರೂ ಭೂಮಿ ನೀಡಬೇಕು ಎಂಬ ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ರೈತರ ಹೋರಾಟಕ್ಕೆ ಮಣಿದು ಭೂಸುಧಾರಣಾ ಕಾಯ್ದೆಯನ್ನು ವಾಪಸ್ ಪಡೆದು ಹೊಸ ಲ್ಯಾಂಡ್‍ಲೀಸ್ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದ್ದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರ ಕ್ಯಾಬಿನೆಟ್ ಸಚಿವ ಕೃಷ್ಣಬೈರೇಗೌಡ ಕೇಂದ್ರದ ರೈತ ವಿರೋಧಿ ಕಾಯ್ದೆಗೆ ಒಲವು ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಮೂಲಕ ಅವರು ರಾಜ್ಯದ ರೈತರಿಗೆ ದ್ರೋಹ ಬಗೆದಿದ್ದಾರೆ. ರಾಜ್ಯದಲ್ಲಿ ಮೈಸೂರು ಭಾಗದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರ ಆದಾಯವನ್ನು ಹೆಚ್ಚಿಸುವ ಕೆಲಸ ಮಾಡಬೇಕಿದೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದು ಹೇಳುವ ಪ್ರಧಾನಿ ಮೋದಿ ತಮ್ಮ ಸ್ನೇಹಿತ ಗೌತಮ್ ಅದಾನಿಯನ್ನು ಸಂರಕ್ಷಣೆ ಮಾಡುತ್ತಿದ್ದಾರೆ. ಬೆಲೆ ಹೆಚ್ಚಳವಾಗದೆ ಆದಾಯ ಹೆಚ್ಚಾಗುವುದಿಲ್ಲ. ಪರ್ಯಾಯ ಕೃಷಿಯ ಬದಲು ರೈತರ ಏಳಿಗೆಗೆ ಬೇರೆ ಯಾವುದೇ ಮಾರ್ಗವಿಲ್ಲ. ಹಾಗಾಗಿ ಕೂಡಲೇ ಕೇಂದ್ರ ಸರ್ಕಾರ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿ ಮಾಡಬೇಕು. ವೆಚ್ಚದ ಮೇಲೆ ಶೇ.50ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಸಮ್ಮೇಳನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಕಾಂ.ಕೆ.ಬಸವರಾಜು, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಜಯರಾಂ, ಕರ್ನಾಟಕ ಪ್ರಾಂತ ರೈತ ಸಂಘದ ಮೈಸೂರು ತಾಲೂಕು ಅಧ್ಯಕ್ಷ ಜವರೇಗೌಡ, ನಂಜಯ್ಯ, ಚಿಕ್ಕಣ್ಣೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.  (ಬಿ.ಎಂ-ಎಸ್.ಎಚ್)

Leave a Reply

comments

Related Articles

error: