ಕರ್ನಾಟಕಪ್ರಮುಖ ಸುದ್ದಿ

ಅಕ್ರಮವಾಗಿ ಚಿನ್ನಾಭರಣ ಸಾಗಿಸುತ್ತಿದ್ದ ಇಬ್ಬರ ಬಂಧನ: 6 ಕೆ.ಜಿ. 55 ಗ್ರಾಂ ಚಿನ್ನ ವಶಕ್ಕೆ

ಬೆಂಗಳೂರು,ನ.21- ನಗರದಲ್ಲಿ ಅಕ್ರಮವಾಗಿ ಚಿನ್ನಾಭರಣ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ, 6 ಕೆ.ಜಿ. 55 ಗ್ರಾಂ ಚಿನ್ನಾಭರಣವನ್ನು ಸಿಟಿ ಮಾರ್ಕೆಟ್ ಪೊಲೀಸರು ಜಪ್ತಿ ಮಾಡಿದ್ದಾರೆ.

ಮುಂಬೈನ ದಲ್ವತ್‌ಸಿಂಗ್ (34) ಹಾಗೂ ರಾಜಸ್ಥಾನದ ವಿಕಾಸ್ (35) ಬಂಧಿತರು. ನಿನ್ನೆ ರಾತ್ರಿ ಇಬ್ಬರು ಆರೋಪಿಗಳು, ಕೋರಿಯರ್ ಬ್ಯಾಗ್‌ನಲ್ಲಿ ಚಿನ್ನಾಭರಣ ಇಟ್ಟುಕೊಂಡು ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಗಸ್ತಿನಲ್ಲಿದ್ದ ಸಿಬ್ಬಂದಿ, ದೊಡ್ಡಪೇಟೆ ವೃತ್ತದಲ್ಲಿ ಆರೋಪಿಗಳನ್ನು ತಡೆದು ವಿಚಾರಣೆ ನಡೆಸಿದಾಗ ಚಿನ್ನಾಭರಣ ಪತ್ತೆ ಆಗಿದೆ.

ವಿಚಾರಣೆ ವೇಳೆ ನಗರ್ತ್ ಪೇಟೆಯ ಎಸ್.ಎಸ್ ಜ್ಯೂವೆಲ್ಲರ್ಸ್​ಗೆ ಸೇರಿದ ಚಿನ್ನಭಾರಣ ಎಂದು ತಿಳಿದುಬಂದಿದ್ದು, 67 ನೆಕ್ಲೇಸ್ ನಿಂದ 6 ಕೆ.ಜಿ. 55 ಗ್ರಾಂ ಚಿನ್ನಾಭರಣದ ಮೌಲ್ಯ ಅಂದಾಜು 3 ಕೋಟಿ ರೂ. ಎನ್ನಲಾಗಿದೆ.

ಜಪ್ತಿಯಾದ ಆಭರಣಗಳೆಲ್ಲ ಆಯಂಟಿಕ್​ ಪೀಸ್ ಆಗಿದ್ದು, ಮುಂಬೈನಲ್ಲಿ ತಯಾರಾಗಿರುವುದಾಗಿ ತಿಳಿದುಬಂದಿದೆ. ಮುಂಬೈನಿಂದ ಬೆಂಗಳೂರಿಗೆ ಕೊರಿಯರ್ ಮೂಲಕ ಬಂದಿತ್ತು. ಬಳಿಕ ಬೆಂಗಳೂರಿನಲ್ಲಿ ಚಿನ್ನಾಭರಣ ತೆಗೆದುಕೊಂಡು ಬ್ಯಾಗ್​ನಲ್ಲಿ ಹಾಕಿಕೊಂಡು ಅಂಗಡಿಗೆ ಹೋಗಿ ಸ್ಯಾಂಪಲ್ ತೋರಿಸ್ತಿದ್ರು. ಅಂಗಡಿಯವರು ಆರ್ಡರ್ ಕೊಟ್ರೆ ಮತ್ತೆ ತಯಾರು ಮಾಡಿ ಕೊಡುತ್ತಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಆರೋಪಿಗಳು, ಚಿನ್ನಾಭರಣಕ್ಕೆ ಯಾವುದೇ ದಾಖಲೆ ನೀಡಿಲ್ಲ. ಚಿನ್ನಾಭರಣ ಮೂಲದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: