ಮೈಸೂರು

ಒಂದೇ ವಾರದಲ್ಲಿ ತಮ್ಮ ಸ್ಥಾನಕ್ಕೆ ಮೂರನೇ ಬಾರಿಗೆ ರಾಜೀನಾಮೆ ಸಲ್ಲಿಸಿದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ

ಮೈಸೂರು, ನ.21:- ಎಚ್.ಡಿ.ಕೋಟೆ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷ ಮಲ್ಲಿಕಾರ್ಜುನ ಒಂದೇ ವಾರದಲ್ಲಿ ತಮ್ಮ ಸ್ಥಾನಕ್ಕೆ ಮೂರನೇ ಬಾರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಪಿಎಲ್‌ಡಿ ಬ್ಯಾಂಕಿನಲ್ಲಿ ಅಧಿಕಾರಕ್ಕೆ ಬಂದಿರುವುದರಿಂದ ಪಕ್ಷದ ಮೂವರು ನಿರ್ದೇಶಕರಿಗೆ ತಲಾ 20 ತಿಂಗಳು ಅಧಿಕಾರ ಹಂಚುವ ಸಲುವಾಗಿ ಪಕ್ಷದ ವರಿಷ್ಠರು ರೂಪಿಸಿದ್ದರು. ಅದರಂತೆ ಕಳೆದ 2 ತಿಂಗಳ ಹಿಂದೆಯೇ ಮಲ್ಲಿಕಾರ್ಜುನ್ ರಾಜೀನಾಮೆ ನೀಡುವಂತೆ ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಸಂಸದ ಧ್ರುವನಾರಾಯಣ ಸೇರಿದಂತೆ ಅನೇಕರು ಸೂಚಿಸಿದ್ದರು. ಆದರೆ, ಅಧ್ಯಕ್ಷರು ರಾಜೀನಾಮೆ ನೀಡಲು ಕಾರಣಾಂತರದಿಂದ ಮುಂದಾಗಿರಲಿಲ್ಲ. ಕೊನೆಗೆ ಶಾಸಕರು ಮತ್ತು ನರಸೀಪುರದ ರವಿ ಸೇರಿದಂತೆ ಅನೇಕ ಮುಖಂಡರು ಮಲ್ಲಿಕಾರ್ಜುನ್ ಅವರಿಂದ ಇದೇ 9 ರಂದು ರಾಜೀನಾಮೆ ಕೊಡಿಸಿದ್ದರು.

ಮಲ್ಲಿಕಾರ್ಜುನ್ ನ.12ರಂದು ರಾಜೀನಾಮೆ ವಾಪಸ್ ಪಡೆದು, ಮತ್ತೆ 13ರಂದು ರಾಜೀನಾಮೆ ನೀಡಿದರು. ಪುನಃ ನ.18ರಂದು ರಾಜೀನಾಮೆ ವಾಪಸ್ ಪಡೆದು ಮತ್ತೆ 19ರಂದು ರಾಜೀನಾಮೆ ಪತ್ರವನ್ನು 13ರಂದು ಸಲ್ಲಿಸಿರುವಂತೆ ಬ್ಯಾಂಕಿನ ಅಧಿಕಾರಿಗಳಿಗೆ ನೀಡಿದ್ದಾರೆ.

ಉಪಾಧ್ಯಕ್ಷರ ಸ್ಥಾನಕ್ಕೆ ಸರ್ವಮಂಗಳ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಅವರು ಸಹ ರಾಜೀನಾಮೆ ನೀಡಿರಲಿಲ್ಲ. ಪಕ್ಷದ ಮುಖಂಡರ ನಿರ್ದೇಶನದಂತೆ ಶನಿವಾರ ರಾಜೀನಾಮೆ ಪತ್ರವನ್ನು ಅಧ್ಯಕ್ಷರ ಸಮ್ಮುಖದಲ್ಲಿ ನ.13ರಂದು ಸಲ್ಲಿಸಿರುವಂತೆ ಅಧಿಕಾರಿಗಳಿಗೆ ಪತ್ರ ನೀಡಿದ್ದಾರೆ.

ರಾಜೀನಾಮೆ ಸಲ್ಲಿಸಿದ 15 ದಿನದೊಳಗಾಗಿ ಅಧ್ಯಕ್ಷರು, ಉಪಾಧ್ಯಕ್ಷರು ರಾಜೀನಾಮೆ ಪತ್ರ ವಾಪಸ್ ಪಡೆಯದೇ ಇದ್ದರೆ ಅದು ಅಂಗೀಕಾರವಾಗಲಿದೆ ಮತ್ತೆ ಇದೇ ರೀತಿಯ ಬೆಳವಣಿಗೆಗಳು ನಡೆದರೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಈ ವಿಚಾರ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: