ಪ್ರಮುಖ ಸುದ್ದಿ

ಕನ್ನಡ ಕಾಯಕ ವರ್ಷಾಚರಣೆಗೆ ಅಷ್ಟ ಕಾರ್ಯಸೂಚಿ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ರಾಜ್ಯ(ಬೆಂಗಳೂರು)ನ.21:- ಕನ್ನಡ ಕಾಯಕ ವರ್ಷಾಚರಣೆಗೆ ಪೂರಕವಾದ ಅಷ್ಟ ಕಾರ್ಯಸೂಚಿಗಳನ್ನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧದಲ್ಲಿಂದು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಈಗಾಗಲೇ ಘೋಷಣೆ ಮಾಡಲಾಗಿರುವ “ಕನ್ನಡ ಕಾಯಕ ವರ್ಷಾಚರಣೆ 2020-21” ಕ್ಕೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಾರ್ಯಸೂಚಿಗಳ ಅಡಿಯಲ್ಲಿ ಹಲವು ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದು, ಎಲ್ಲ ಸರ್ಕಾರಿ ಮತ್ತು ಸರ್ಕಾರೇತರ ಇಲಾಖೆಗಳು, ಸಂಘ-ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಈ ಬಗ್ಗೆ ಕಡ್ಡಾಯವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಕನ್ನಡ ಕಾಯಕ ವರ್ಷದ ಅಷ್ಟ ಕಾರ್ಯಸೂಚಿಗಳು ಹೀಗಿವೆ
ವಿಧಾನಸೌಧದಿಂದ ಗ್ರಾಮಪಂಚಾಯಿತಿಯವರೆಗೆ ಕನ್ನಡದಲ್ಲೇ ಆಡಳಿತ ಇದು ನಮ್ಮ ಕನ್ನಡ ಕಾಯಕ.
ಶಿಕ್ಷಣ ಮಾಧ್ಯಮ ಕನ್ನಡವಾಗಿರಲಿ. ಕನ್ನಡದಲ್ಲಿ ಕಲಿಯುವುದು ಸಹಜ, ಸುಂದರ. ಇದು ನಮ್ಮ ಕನ್ನಡ ಕಾಯಕ.
ನೆಲ, ಜಲ, ವಿದ್ಯುತ್, ಸಾರಿಗೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡವರು ಕನ್ನಡಿಗರಿಗೆ ಉದ್ಯೋಗ ನೀಡುವುದು ಕೃತಜ್ಞತಾಪೂರ್ವ ಕನ್ನಡದ ಕಾಯಕ.
ಕರ್ನಾಟಕದಲ್ಲಿ ಅನ್ನ ತಿನ್ನುವ ಪ್ರತಿಯೊಂದು ಸಂಸ್ಥೆ, ಸಂಘ, ವ್ಯಕ್ತಿಗಳು ಸರೋಜಿನಿ ಮಹಿಷಿ ವರದಿ ಪಾಲಿಸುವುದು ಅವಶ್ಯ ಕನ್ನಡ ಕಾಯಕ.
ನಮ್ಮ ವ್ಯವಹಾರ ಕನ್ನಡದಲ್ಲಿರಲಿ; ಮನೆ, ಮನ, ನಾಮಫಲಕಗಳಲ್ಲೂ ಕನ್ನಡವೇ ಇರಲಿ. ಅದುವೇ ಕನ್ನಡದ ಕಾಯಕ.
ಕನ್ನಡದ ನಾಳೆಗಳಿಗಾಗಿ ಗಣಕಯಂತ್ರಗಳಲ್ಲಿ ಕನ್ನಡವನ್ನೇ ಬಳಸೋಣ; ಇದು ನಮ್ಮ ಕನ್ನಡ ಕಾಯಕ.
ಕರ್ನಾಟಕಕ್ಕೆ ಗಡಿ ಇದೆ. ಕನ್ನಡಕ್ಕೆ ಗಡಿ ಇಲ್ಲ, ಕನ್ನಡ ಪರಂಪರೆ ವಿಶ್ವ ಪರಂಪರೆ, ವಿಶ್ವಮಾನವತತ್ವ ನಮ್ಮ ಕನ್ನಡ ಕಾಯಕ.
ನಿರಂತರ ಕನ್ನಡ ಕಲಿಕೆ, ನಿರಂತರ ಕನ್ನಡ ಬಳಕೆ, ಇದು ನಮ್ಮ ಕನ್ನಡ ಕಾಯಕ.
ಕನ್ನಡ ಕಾಯಕ ವರ್ಷದಲ್ಲಿ ಕನ್ನಡ ಭಾಷೆಯನ್ನು ವಿಸ್ತಾರಗೊಳಿಸುವುದು ಬಹುಮುಖ್ಯವಾದ ಅಂಶವಾಗಿದೆ. ಸರ್ಕಾರದ ಇಲಾಖೆಗಳು ಎಲ್ಲ ಹಂತದಲ್ಲೂ ಕನ್ನಡವನ್ನು ಅನುಷ್ಠಾನಗೊಳಿಸಬೇಕಿದೆ. ಅಲ್ಲದೆ ಸಂಘ-ಸಂಸ್ಥೆಗಳು, ನಾಗರಿಕರೂ ಸಹ ಇಂತಹ ಮಹತ್ತರ ಕಾರ್ಯದಲ್ಲಿ ಕೈಜೋಡಿಸುವುದು ಬಹುಮುಖ್ಯವಾಗಿದೆ ಎಂದರು.
ಕನ್ನಡ ಕಾಯಕದ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡಬೇಕಿದ್ದು, ಎಲ್ಲ ಕನ್ನಡಿಗರೂ ಈ ಒಂದು ಕಾಯಕದಲ್ಲಿ ಸಹಕಾರ ನೀಡುವಂತೆ ಕೋರಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: