ಮೈಸೂರು

ಸಾರ್ವಜನಿಕರ ಕುಂದು ಕೊರತೆ ನಿವಾರಣೆಗೆ ಜಿಲ್ಲಾಧಿಕಾರಿಗಳಿಂದ ‘ಸ್ಪಂದನ’ ಕಾರ್ಯಕ್ರಮ

ಮೈಸೂರು, ನ.21 :- ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸುವ ಹಾಗೂ ಸಾರ್ವಜನಿಕರು ಗ್ರಾಮಾಂತರ ಪ್ರದೇಶ ಅಥವಾ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಅವರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಿಂದ ಕಚೇರಿಗಳಿಗೆ ಬರುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಜನರ ಬಳಿಗೆ ತೆರಳಿ ಮನವಿಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ‘ಸ್ಪಂದನ’ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾಧಿಕಾರಿಗಳು ಸಾರ್ವಜನಿಕರಿಂದ ಸ್ವೀಕರಿಸುವ ಕುಂದುಕೊರತೆ ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲು ಅವಕಾಶವಿದ್ದಲ್ಲಿ ಇತ್ಯರ್ಥ ಪಡಿಸಲಾಗುವುದು. ಸ್ಥಳದಲ್ಲಿ ಇತ್ಯರ್ಥ ಪಡಿಸಲು ಅವಕಾಶವಿಲ್ಲದಿದ್ದಲ್ಲಿ ಸ್ಪಂದನ ತಂತ್ರಾಂಶದ ಮೂಲಕ ಅರ್ಜಿಗಳನ್ನು ಪಡೆದು ಅವುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು. ಈ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸಾರ್ವಜನಿಕರ ಕುಂದು ಕೊರತೆಗಳ ಸಂಬಂಧ ಮೈಸೂರು ಜಿಲ್ಲಾ ವೆಬ್‍ಸೈಟ್ mysore.nic.in ನಲ್ಲಿ ಇರುವ ಸ್ಪಂದನ ತಂತ್ರಾಂಶದಲ್ಲಿ ಕುಂದು ಕೊರತೆ ಅರ್ಜಿಗಳನ್ನು ಅಪ್‍ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಈ ತಂತ್ರಾಂಶದ ಮೂಲಕವೂ ಸಹ ಅರ್ಜಿಗಳಲ್ಲಿ ಸಲ್ಲಿಸಬಹುದಾಗಿದೆ.
ಸ್ಪಂದನ ತಂತ್ರಾಂಶದಲ್ಲಿ ನಮೂದಾಗುವಂತಹ ಸಾರ್ವಜನಿಕ ಕುಂದುಕೊರತೆ ಅರ್ಜಿಗಳನ್ನು ಆಯಾಯ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಅವರ ವೈಯಕ್ತಿಕ ಗಮನ ಹರಿಸಿ ಇತ್ಯರ್ಥ ಪಡಿಸಲು ಕ್ರಮ ತೆಗೆದುಕೊಂಡು ಅರ್ಜಿದಾರರಿಗೆ ಮಾಹಿತಿಯನ್ನು ನೀಡುವರು. ಜಿಲ್ಲಾಧಿಕಾರಿಗಳು ವೈಯಕ್ತಿವಾಗಿ ಎಲ್ಲಾ ಅರ್ಜಿಗಳ ಸ್ಥಿತಿಯನ್ನು ಹಾಗೂ ವಿಲೇವಾರಿಯನ್ನು ಖುದ್ದಾಗಿ ಗಮನಿಸುವುದರಿಂದ ಸಾರ್ವಜನಿಕರ ಕುಂದುಕೊರತೆಗಳನ್ನು ಕಾನೂನಿನ ಅನ್ವಯವೇ ಇತ್ಯರ್ಥ ಪಡಿಸಲು ಅವಕಾಶವಿರುತ್ತದೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಈ ಹಿಂದೆ ಹಾಸನ ಜಿಲ್ಲೆಯಲ್ಲಿ ಈ ಸ್ಪಂದನಾ ಕಾರ್ಯಕ್ರಮವನ್ನು ನಡೆಸಿದ್ದು, ಸದರಿ ಸ್ಪಂದನಾ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ಇತ್ಯರ್ಥ ಪಡಿಸುವಲ್ಲಿ ಯಶಸ್ವಿಯಾಗಿದ್ದು, ಮೈಸೂರು ಜಿಲ್ಲೆಯಲ್ಲಿಯೂ ಸಹ ಸ್ಪಂದನ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ಇತ್ಯರ್ಥ ಪಡಿಸಲು ಅವಕಾಶವಾಗುವಂತೆ ಎಲ್ಲರೂ ಸಹಕರಿಸುವಂತೆ ಕೋರಲಾಗಿದೆ.
ಸ್ಪಂದನಾ ಕಾರ್ಯಕ್ರಮವನ್ನು ನವೆಂಬರ್ 26 ರಂದು ಬೆಳಿಗ್ಗೆ 10.30 ಗಂಟೆಗೆ ನಂಜನಗೂಡಿನ ಡಾ.ಅಂಬೇಡ್ಕರ್ ಭವನ, ಮಧ್ಯಾಹ್ನ2.30 ಗಂಟೆಗೆ ತಿ.ನರಸೀಪುರದ ಡಾ.ಅಂಬೇಡ್ಕರ್ ಭವನ, ನವೆಂಬರ್ 27 ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರು ತಾಲ್ಲೂಕಿನ ಗುಂಗ್ರಾಲ್ ಛತ್ರ, ಮಧ್ಯಾಹ್ನ 2.30 ಗಂಟೆಗೆ ಕೆ.ಆರ್.ನಗರದ ಶಿಕ್ಷಕರ ಭವನ, ನವೆಂಬರ್ 30 ರಂದು ಬೆಳಿಗ್ಗೆ 10.30 ಗಂಟೆಗೆ ಹುಣಸೂರಿನ ಡಾ.ಅಂಬೇಡ್ಕರ್ ಭವನ, ಮಧ್ಯಾಹ್ನ 2.30 ಗಂಟೆಗೆ ಪಿರಿಯಾಪಟ್ಟಣದ ಸುವರ್ಣ ಸೌಧ, ತಾಲ್ಲೂಕು ಪಂಚಾಯಿತಿ, ಡಿಸೆಂಬರ್ 1 ರಂದು ಸರಗೂರು ಹಾಗೂ ಹೆಚ್.ಡಿ. ಕೋಟೆಗೆ ಸಂಬಂಧಿಸಿದಂತೆ ಬೆಳಿಗ್ಗೆ 10.30 ಗಂಟೆಗೆ ಹೆಚ್.ಡಿ.ಕೋಟೆಯ ಡಾ.ಅಂಬೇಡ್ಕರ್ ಭವನದಲ್ಲಿ ನಡೆಸಲಾಗುವುದು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಅಧಿಕಾರಿಗಳು ಮತ್ತು ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿ ಅನ್ವಯ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: