ಮೈಸೂರು

ಏ.13 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ :ಎಣಿಕೆ ಕೇಂದ್ರದ ಸುತ್ತ ಭದ್ರ ಕಾವಲು ಹಾಕಲಾಗಿದೆ : ರವಿ ಚನ್ನಣ್ಣನವರ್

ಪ್ರತಿಷ್ಠೆಯ ಕಣವಾದ ನಂಜನಗೂಡಿನ ಚುನಾವಣೆ ಮುಗಿದಿದ್ದು ಮತ ಎಣಿಕೆಗೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಎ.13ರಂದು  ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ನಂಜನಗೂಡಿನ ಜೆಎಸ್ ಎಸ್ ಪದವಿಪೂರ್ವ ಕಾಲೇಜಿನಲ್ಲಿ ಇಲ್ಲಿನ ವಿಧಾನಸಭಾ ಕ್ಷೇತ್ರದ 236 ಮತಗಟ್ಟೆಗಳಲ್ಲಿ ಬಳಸಲಾಗಿದ್ದ ಮತಯಂತ್ರಗಳನ್ನು ಭದ್ರವಾಗಿ ಇರಿಸಲಾಗಿದೆ.

24 ಗಂಟೆಗಳ ಸಿಸಿ ಟಿವಿಯ ಕಣ್ಗಾವಲಿನಲ್ಲಿ ವಿದ್ಯುನ್ಮಾನ ಯಂತ್ರವಿದೆ. ಜೊತೆಗೆ ಮೈಸೂರಿನ ಸಿಪಿಐ ಶಿವಮೂರ್ತಿ ನೇತೃತ್ವದಲ್ಲಿ ಮೂವರು ಸಬ್ ಇನ್ಸಪೆಕ್ಟರ್, 6ಪಿಎಸ್ ಐ ಹಾಗೂ 25 ಕಾನ್ಸಟೇಬಲ್ ಗಳನ್ನು ನೇಮಕ ಮಾಡಲಾಗಿದೆ. ಒಳಹಂತದಲ್ಲಿ ಕೇಂದ್ರ ಅರೆಸೇನಾಪಡೆ ಹಾಗೂ ಹೊರಹಂತದಲ್ಲಿ ರಾಜ್ಯ ಪೊಲೀಸರು ಭದ್ರತೆ ನೀಡಿದ್ದಾರೆ. ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳು ಹೊರಭಾಗದಲ್ಲಿ ಭದ್ರತಾ ಕೊಠಡಿ ಕಾಯಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಏ.9ರ ರಾತ್ರಿ 11.55ಕ್ಕೆ ಮತಯಂತ್ರಗಳನ್ನು ಸೀಲ್ ಮಾಡಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

ಸಿಟಿ ಟುಡೆಯೊಂದಿಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಮಾತನಾಡಿ  ಸಿ.ಎ.ಎಸ್.ಎಫ್, ಕೆ.ಎಸ್.ಆರ್.ಪಿ, ಡಿಎಆರ್ ನ ತಲಾ ಒಂದು ತುಕಡಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 24 ಗಂಟೆ ಪಾಳಿಯಲ್ಲಿ ಭದ್ರತೆ ಒದಗಿಸುತ್ತಿದ್ದಾರೆ. ಮತ ಯಂತ್ರವನ್ನು  ಸರ್ಪಗಾವಲಿನಂತೆ ಕಾಯಲಾಗುತ್ತಿದೆ. ಪ್ಯಾರಾ ಮಿಲಿಟರಿಯ ಜೊತೆ ಇಲ್ಲಿನ ಸಿಬ್ಬಂದಿಗಳೂ ಸಹ ಸಹಕಾರ ನೀಡುತ್ತಿದ್ದಾರೆ. ಭದ್ರವಾದ ಕಣ್ಗಾವಲಿದ್ದು, ಯಾವುದೇ ಅಭದ್ರತೆಯಿಲ್ಲ. ಈ ಊರಿಗೆ ಬರುವ, ಹೋಗುವ ಪ್ರತಿಯೋರ್ವರ ಮೇಲೂ ಕಣ್ಣಿರಿಸಲಾಗಿದೆ ಎಂದರು.

ಏ.13ರಂದು ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: