ಕರ್ನಾಟಕ

ರಾಜ್ಯದಲ್ಲಿ `ಮಹಾನಾಯಕ’ ನ ಮಹಾಜಾತ್ರೆ: ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ

ಮಹದೇವಪುರ,(ಶ್ರೀರಂಗಪಟ್ಟಣ),ನ.23-ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ಮಹಾನಾಯಕ ಧಾರವಾಹಿಯೂ ರಾಜ್ಯದಲ್ಲಿ `ಮಹಾನಾಯಕನ ಮಹಾಜಾತ್ರೆ’ ಯಾಗಿ ನಡೆಯುತ್ತಿದೆ ಎಂದು ಗಾಂಧಿನಗರದ ಉರಿಲಿಂಗಿಪೆದ್ದೀಶ್ವರ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ನಿನ್ನೆ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ನಾಲ್ಕನೇ ವಾರ್ಷಿಕೋತ್ಸವ, ಮಹಾನಾಯಕ ಫ್ಲೇಕ್ಸ್ ಅನಾವರಣ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶ್ರೀಗಳು ಮಹಾನಾಯಕ ಫ್ಲೇಕ್ಸ್ ಅನ್ನು ಅನಾವರಣಗೊಳಿಸಿ ಮಾತನಾಡಿದರು.

ಕಲಬುರ್ಗಿ, ರಾಯಚೂರು ಸೇರಿದಂತೆ ರಾಜ್ಯಾದ್ಯಂತ ನಡೆದ ಮಹಾನಾಯಕ ಫ್ಲೇಕ್ಸ್ ಅನಾವರಣ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಮಹದೇವಪುರದಲ್ಲಿ ಅಳವಡಿಸಿರುವಷ್ಟು ದೊಡ್ಡ ಫ್ಲೇಕ್ಸ್ ಎಲ್ಲಿಯೂ ಅಳವಡಿಸಿಲ್ಲ. ಇದು ಸಂಭ್ರಮವಷ್ಟೇ ಅಲ್ಲ, ಮಹಾನಾಯಕನ ಮಹಾಜಾತ್ರೆ ಎಂದು ಬಣ್ಣಿಸಿದರು.

ಅಂಬೇಡ್ಕರ್ ಅವರು ತಮ್ಮ ಕೊನೆಯ ದಿನಗಳಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ, ನಾನು ಸತ್ತರೆ ಏನು ನಷ್ಟ ಇಲ್ಲ. ಏಕೆಂದರೆ ಮಲಗಿದ್ದ ನನ್ನ ಜನರನ್ನು ಎಚ್ಚರಿಸಿರುವೆ. ಭಾರತದ ಪ್ರತಿ ಗುಡಿಸಲಿನಲ್ಲೂ ಒಬ್ಬೊಬ್ಬ ಬಾಬಾ ಸಾಹೇಬರು ಜನಿಸುತ್ತಾರೆ ಎಂದು ಉತ್ತರಿಸುತ್ತಾರೆ. ಅವರ ಮಾತನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದರು.

ಮುಟ್ಟಿಸಿಕೊಳ್ಳದವನ ಒಂದು ಪೆನ್ನು 136 ಕೋಟಿ ಭಾರತೀಯರ ಬದುಕನ್ನು ಬರೆಯಿತು. ಅಂಬೇಡ್ಕರ್ ಅವರು ಆಯುಧಗಳ ಮೂಲಕ ದೇಶ ಕಟ್ಟಲಿಲ್ಲ. ಪೆನ್ನಿನ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು. ಶಿಕ್ಷಣವೊಂದೇ ಆಸ್ತಿ ಎಂದು ಸಾರಿದರು. ವಿಶ್ವವೇ ಯಾಕೇ ಅಂಬೇಡ್ಕರ್ ಕಡೆ ನೋಡುತ್ತಿದ್ದೆ ಎಂದರೆ ಅವರು 50 ಸಾವಿರ ಪುಸ್ತಕಗಳ ಒಡೆಯ. ಅವರ ವಿದ್ವತ್ತಿಗೆ ಪಾಂಡಿತ್ಯಕ್ಕೆ ಜ್ಞಾನಕ್ಕೆ ಜಗತ್ತು ಗೌರವ ಸಲ್ಲಿಸುತ್ತಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಲಂಡನ್ ನಿಂದ 1913ರಲ್ಲಿ ತಮ್ಮ ಪತ್ನಿ ರಮಾಬಾಯಿ ಅವರಿಗೆ ಪತ್ರವೊಂದರಲ್ಲಿ `ರಮಾ ಮೋಜು ಮಸ್ತಿ ಮಾಡಲು ನಾನು ವಿದೇಶಕ್ಕೆ ಬಂದಿಲ್ಲ. ನಾಯಿ, ನರಿ, ಕತ್ತೆಯನ್ನು ಮುದ್ದಾಡುವವರು ನನ್ನ ಜನಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ. ಸಾಮಾಜಿಕವಾಗಿ ಅತ್ಯಂತ ನಿಕೃಷ್ಟವಾಗಿರುವ ನನ್ನ ಜನಗಳಿಗಾಗಿ 2 ಪೀಸು ಬ್ರೆಡ್ಡು ತಿಂದು 18 ಗಂಟೆಗಳ ಕಾಲ ಓದುತ್ತಿದ್ದೇನೆ. ಜ್ಞಾನಾಗ್ನಿ ಕುಂಟದಲ್ಲಿ ಬೇಯುತ್ತಿದ್ದೇನೆ ಎಂದು ನೊಂದು ಬರೆದಿದ್ದಾರೆ. ಅಂಬೇಡ್ಕರ್ ಅವರು ಸುಮ್ಮನೆ ಮಹಾನಾಯಕರಾಗಲಿಲ್ಲ. ಅದರ ಹಿಂದೆ ದೊಡ್ಡ ತ್ಯಾಗ ಇದೆ. ಅತ್ಯಂತ ಶ್ರಮ ಮತ್ತು ಕರಾಳ ರಾತ್ರಿಗಳಿವೆ. ನಾಲ್ಕು ಮಕ್ಕಳನ್ನು ಕಳೆದುಕೊಂಡರು. ಸತ್ತ ಮಗನೊಬ್ಬನ ಮೈಮೇಲೆ ಬಿಳಿ ಬಟ್ಟೆ ಹಾಕಲು ಅವರ ಬಳಿ ದುಡ್ಡಿರಲಿಲ್ಲ. ಹೆಂಡತಿಗೆ ಹೊಟ್ಟೆ ತುಂಬಾ ಊಟ ಹಾಕಲಿಲ್ಲ. ವೈಯಕ್ತಿಕವಾಗಿ ಇಷ್ಟೆಲ್ಲ ನೋವುಗಳನ್ನು ಅನುಭವಿಸಿದರೂ ಅಂಬೇಡ್ಕರರು ಸಮಸ್ತ ಭಾರತೀಯರಿಗೆ ಹಕ್ಕನ್ನು ಕೊಟ್ಟರು. ಶೋಷಿತರ ಮಹಾವಿಮೋಚಕರಾದರು ಎಂದು ಸ್ವಾಮೀಜಿ ನುಡಿದರು.

ಅಂಬೇಡ್ಕರ್ ಅವರು ನನ್ನ ಜನ ಅರ್ಜಿ ಕೊಡುವ ಜಾಗದಲ್ಲಿ ನಿಲ್ಲಬಾರದು. ಅರ್ಜಿ ಸ್ವೀಕರಿಸುವ ಜಾಗದಲ್ಲಿರಬೇಕು ಎಂದು ಹೇಳುತ್ತಿದ್ದರು. ಅದನ್ನು ವಿದ್ಯಾರ್ಥಿಗಳು ನಿಜ ಮಾಡಬೇಕು. ಐಪಿಎಸ್, ಐಎಎಸ್, ನ್ಯಾಯಾಧೀಶರಂತಹ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕು. ಪೆನ್ನಿನ ಮೂಲಕ ಕ್ರಾಂತಿ ಮಾಡಿದ ಮಹಾಪುರುಷನ ವಂಶಸ್ಥರಾದ ನಾವುಗಳು ಅವರಿಗೆ ಗೌರವ ತರುವಂತೆ ಜೀವನ ನಡೆಸಬೇಕು ಎಂದು ತಿಳಿಸಿದರು.

ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಅವರು ಮಾತನಾಡಿ, ಡಾ.ಅಂಬೇಡ್ಕರ್ ಅವರು ದಲಿತರ ಸೂರ್ಯ ಮಾತ್ರವಲ್ಲ, ಇಡೀ ಮಾನವ ಕುಲದ ಸೂರ್ಯ. ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟ ತತ್ವವನ್ನು ಅನುಸರಿಸಿದರೆ ಯಶಸ್ಸು, ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನದ ಮೂಲಕ ಬದುಕು ಕೊಟ್ಟ ಅಂಬೇಡ್ಕರ್ ಅವರೇ ನಮಗೇ ದೇವರು. ನಾವೆಲ್ಲ ಅಂಬೇಡ್ಕರ್ ಎಂಬ ದೇವರ ಒಕ್ಕಲು ಎಂದು ಹೇಳಿದರು.

ಬದುಕಿದ್ದಾಗಲೂ ಮತ್ತು ಮೃತಪಟ್ಟ ಮೇಲೂ ಶೋಷಣೆಗೆ ಒಳಗಾದ ಏಕೈಕ ನಾಯಕ ಅಂಬೇಡ್ಕರ್. ಇವತ್ತು ಕೆಲವು ಭಾಗಗಳಲ್ಲಿ ಮಹಾನಾಯಕ ಫ್ಲೇಕ್ಸ್ ಗೆ ಅವಮಾನ ಮಾಡಿರುವ ಬಗ್ಗೆ ಕೇಳುತ್ತಿದ್ದೇವೆ. ಅಂಬೇಡ್ಕರ್ ಅವರ ಭಾವಚಿತ್ರವಿರುವ ಫ್ಲೇಕ್ಸ್ ಅನ್ನು ಅವಮಾನ ಮಾಡುವವರನ್ನು ಮನುಷ್ಯರನ್ನೆಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರನ್ನು ಸರ್ವರೂ ಗೌರವಿಸಬೇಕು. ಅವರು ತೋರಿರುವ ಹಾದಿಯಲ್ಲಿ ಸಾಗಬೇಕು ಎಂದರು.

ಸಾಹಿತಿ ಮಲ್ಕುಂಡಿ ಮಹಾದೇವಸ್ವಾಮಿ ಅವರು ಮಾತನಾಡಿ, ಅಂಬೇಡ್ಕರ್ ವಾದ ಇವತ್ತು ಸಂಪೂರ್ಣ ಕಲುಷಿತ ಆಗಿದೆ. ನೈಜ ಅಂಬೇಡ್ಕರ್ ವಾದವನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಎಂದು ಯುವಕರು ಆಲೋಚಿಸಬೇಕು. ನಿತ್ಯ 2 ಗಂಟೆ ಅಂಬೇಡ್ಕರ್ ಅವರನ್ನು ಓದಬೇಕು. ರಾಮಾಯಣ, ಮಹಾಭಾರತ ಕಾವ್ಯಗಳು ಹರಿಕಥೆ, ನಾಟಕ, ಭಜನೆ ಮೂಲಕ ಜನರನ್ನು ತಲುಪಿದಂತೆಯೇ ಅಂಬೇಡ್ಕರ್ ಜೀವನ ಚರಿತ್ರೆಯೂ ಜನತೆಗೆ ಹತ್ತಿರವಾಗುತ್ತಿದೆ ಎಂದು ನುಡಿದರು.

`ನಾನು ಕೇವಲ ಒಂದು ಜಾತಿ ಅಥವಾ ಜನಾಂಗಕೋಸ್ಕರ ಕೆಲಸ ಮಾಡಿಲ್ಲ. ಭಾರತದ ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಯ ಸಲುವಾಗಿ ಜೀವ ಸವೆಸಿದ್ದೇನೆ. ಸಂಶಯವಿದ್ದರೆ ಹೋಗಿ ಸಂವಿಧಾನ ಓದಿಕೊಳ್ಳಿ’ ಎಂಬ ಸಾಲುಗಳನ್ನು ಮಹಾನಾಯಕ ಫ್ಲೇಕ್ಸ್ ನಲ್ಲಿ ಹಾಕಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪಿಎಚ್.ಡಿ ಪದವೀಧರ ಹೆಬ್ಬಾಡಿಯ ಡಾ.ರವಿಚಂದ್ರ ಅವರನ್ನು ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸುದೀಪ್, ಸುವರ್ಣ, ಎಸ್ಎಸ್ಎಲ್ ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ರೂಪಾ, ದಿವ್ಯಶ್ರೀ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಈ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕರಾದ ಮಹಮ್ಮದ್ ಮರ್ಚೆಂಟ್‌ ಇತರರು ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: