ಮೈಸೂರು

ಅಪ್ರಾಪ್ತ ಹೆಣ್ಣುಮಕ್ಕಳಿಗೆ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ತಳ್ಳುವ ಬೃಹತ್ ಜಾಲ ಪತ್ತೆ : ಕೆ.ಆರ್.ಪೇಟೆ ಮೂಲದ ಮಹಿಳೆ, ಆಕೆಯ ಸಹಾಯಕನ ಬಂಧನ

ಮೈಸೂರು,ನ.24:- ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುವ ಜಾಲವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ.
ಹಣ, ಉದ್ಯೋಗದ ಆಸೆ ತೋರಿಸಿ ಅಮಾಯಕ ಹೆಣ್ಣು ಮಕ್ಕಳನ್ನು ನರಕದ ಕೂಪಕ್ಕೆ ತಳ್ಳುವ ಖದೀಮರ ಜಾಲವನ್ನು ಹೆಬ್ಬಾಳ ಠಾಣೆ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ಒಡನಾಡಿ ಸೇವಾ ಸಂಸ್ಥೆ ಭೇದಿಸಿದೆ.
ಮೈಸೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರ ಮೂಲದ ಟೆಕ್ಕಿಯನ್ನು ಸಂಪರ್ಕಿಸಿದ್ದ ವೇಶ್ಯಾವಾಟಿಕೆ ದಂಧೆ ಖದೀಮರು, ಅವರಿಗೆ ಅಪ್ರಾಪ್ತ ಹೆಣ್ಣು ಮಗಳೊಬ್ಬಳನ್ನು ಪರಿಚಯ ಮಾಡಿಸಿದ್ದರು. ನಂತರ ಆತನಿಗೆ ನಿರಂತರವಾಗಿ ಹೆಣ್ಣು ಮಕ್ಕಳನ್ನು ಸರಬರಾಜು ಮಾಡುವ ಮೂಲಕ ಲಕ್ಷಗಟ್ಟಲೇ ಹಣ ವಸೂಲು ಮಾಡುತ್ತಿದ್ದರು.
ವೇಶ್ಯಾವಾಟಿಕೆ ಚಟಕ್ಕೆ ಬಿದ್ದ ಆತ ತನ್ನ ವೇತನದ ಜತೆ ಸಾಲ ಮಾಡಿ ಹಣ ನೀಡುವ ಮೂಲಕ ಹೈರಾಣಾಗಿ ಕೆಲಸಕ್ಕೆ ಸರಿಯಾಗಿ ಹೋಗದೇ ಉದ್ಯೋಗವನ್ನೂ ಕಳೆದುಕೊಂಡಿದ್ದ. ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದ. ಈ ಎಲ್ಲ ಬೆಳವಣಿಗೆ ಗಮನಿಸುತ್ತಿದ್ದ ಟೆಕ್ಕಿಯ ಸ್ನೇಹಿತರೊಬ್ಬರು, ಒಡನಾಡಿ ಗಮನಕ್ಕೆ ತಂದಿದ್ದಲ್ಲದೆ, ಆತನನ್ನು ಸರಿದಾರಿಗೆ ತರುವಂತೆ ಮನವಿ ಮಾಡಿದ್ದರು.
ಈ ಎಳೆಯನ್ನಿಟ್ಟುಕೊಂಡು ಕಾರ್ಯಾಚರಣೆ ಆರಂಭಿಸಿದಾಗ ಮೊದಲಿಗೆ ವೇಶ್ಯಾವಾಟಿಕೆ ನಡೆಸುತ್ತಿರುವ ತಂಡದ ಪತ್ತೆಗೆ ಮುಂದಾಗಿದ್ದು, ತಂಡದ ನಾಯಕ ಮಂಡ್ಯ ಮೂಲದವನು ಎಂದು ತಿಳಿದು ಬಂದಿದೆ. ಈತ ಹಲವಾರು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ವಾಸ ಅನುಭವಿಸಿ ಬಂದಾತ ಎಂಬುದು ತಿಳಿದು ಬಂದಿದೆ. ಆತನೊಡನೆ ಓರ್ವ ಮಹಿಳೆಯೂ ಇರುವುದು ಖಚಿತವಾಗಿದ್ದು, ಮೈಸೂರು ನಗರದ ಹೆಬ್ಬಾಳಿನಲ್ಲಿ ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದ ಮಹಿಳೆ ಯಾರಿಗೂ ಅನುಮಾನ ಬಾರದಂತೆ ಅಲ್ಲಿಂದಲೇ ದಂಧೆ ನಡೆಸುತ್ತಿದ್ದಳು. ಪಿಂಪ್ ಗಳ ಸಹಕಾರದೊಂದಿಗೆ ನಗರದ ವಿವಿಧ ಲಾಡ್ಜ್ ಗಳಿಗೆ ಹೆಣ್ಣು ಮಕ್ಕಳ ಸರಬರಾಜು ಮಾಡುತ್ತಿದ್ದ ಮಾಹಿತಿಯನ್ನು ತಂಡ ಪಡೆದುಕೊಂಡಿತ್ತು. ಇದರ ಜೊತೆಗೆ ಹೆಬ್ಬಾಳು, ವಿಜಯನಗರ ಆಸುಪಾಸಿನ ಕೆಲ ಮನೆಗಳಲ್ಲಿಯೂ ಈ ತಂಡ ಹೆಣ್ಣು ಮಕ್ಕಳನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವುದು ಒಡನಾಡಿ ತಂಡದ ಗಮನಕ್ಕೆ ಬಂದಿತ್ತು.
ಪೊಲೀಸರೊಂದಿಗೆ ಅಂತಿಮ ಕಾರ್ಯಾಚರಣೆಗೆ ಸಿದ್ಧವಾದ ತಂಡಕ್ಕೆ ಹೆಬ್ಬಾಳಿನಲ್ಲಿ ವೇಶ್ಯಾವಾಟಿಕೆಗೆ ಬಳಸಲು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಅಡಗಿಸಿಡಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ಹೆಬ್ಬಾಳ ಠಾಣೆ ಪೊಲೀಸರು, ಮಕ್ಕಳ ರಕ್ಷಣಾ ಘಟಕದ ಉಸ್ತುವಾರಿಯಲ್ಲಿ ತಂಡ ಹೆಣ್ಣು ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆಗೆ ಇಳಿದಿದೆ. 6 ಮಂದಿ ಕಾರ್ಯಕರ್ತರು ಮನೆ ಸುತ್ತುವರಿದಿದ್ದರು. ಮಧ್ಯಾಹ್ನದಿಂದಲೇ ಮನೆ ಮುಂಭಾಗ ಕಾದು ಕುಳಿತ ತಂಡಕ್ಕೆ ಸಂಜೆಯಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಿ ಯುವಕನೊಬ್ಬ ಬೈಕ್ ನಲ್ಲಿ ಬಂದಿದ್ದು, ನಂತರ ಅಲ್ಲಿಂದ ಬಾಲಕಿಯನ್ನು ಬೈಕ್ ನಲ್ಲಿ ಕರೆದೊಯ್ದಿದ್ದ. ಆತನ ಬೈಕ್ ಹಿಂಬಾಲಿಸಿದ ತಂಡಕ್ಕೆ ಬಾಲಕಿಯೊಂದಿಗೆ ತೆರಳಿದ ಖದೀಮ ಆಕೆಯನ್ನು ಲಾಡ್ಜ್ವೊಂದಕ್ಕೆ ಕರೆದೊಯ್ದಿರುವುದು ಕಂಡು ಬಂದಿದೆ. ಪೊಲೀಸರ ಸಹಕಾರದೊಂದಿಗೆ ವಸತಿಗೃಹದ ಮೇಲೆ ದಾಳಿ ನಡೆಸಿ ಅಲ್ಲಿದ್ದ ಅಪ್ರಾಪ್ತ ಬಾಲಕಿ ರಕ್ಷಣೆ ಮಾಡಿದ್ದಾರೆ. ಆಕೆ ನೀಡಿದ ಮಾಹಿತಿ ಮೇರೆಗೆ ಮತ್ತೋರ್ವ ಅಪ್ರಾಪ್ತ ಬಾಲಕಿ, ಹೆಣ್ಣು ಮಕ್ಕಳನ್ನು ಸರಬರಾಜು ಮಾಡುತ್ತಿದ್ದ ಕೆ.ಆರ್.ಪೇಟೆ ಮೂಲದ ಮಹಿಳೆ ಮತ್ತು ಆಕೆಯ ಸಹಾಯಕನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಬಾಲಕಿ ಬಳಸಿಕೊಂಡವರಲ್ಲಿ ಶ್ರೀಮಂತರು ಹಾಗೂ ಪ್ರತಿಷ್ಠಿತರ ಪಟ್ಟಿಯೇ ಇರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬಳಕೆಯಾದ ಐಷಾರಾಮಿ ಕಟ್ಟಡ ನಗರಪಾಲಿಕೆ ಮಾಜಿ ಸದಸ್ಯರೊಬ್ಬರಿಗೆ ಸೇರಿದೆ. ಸುಮಾರು ಐದು ಅಂತಸ್ತಿನ ಕಟ್ಟಡದಲ್ಲಿ ಒಂದು ಮಹಡಿ ಐದು ಕೊಠಡಿಗಳನ್ನು ವೇಶ್ಯಾವಾಟಿಕೆಗೆ ಮೀಸಲಿಡಲಾಗಿತ್ತು ಎನ್ನುವುದು ತನಿಖೆ ವೇಳೆ ಪತ್ತೆಯಾಗಿದ್ದು, ಈ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.
ಕಳೆದ 6 ತಿಂಗಳ ಹಿಂದೆ ಇಂತಹುದೇ ಜಾಲವೊಂದನ್ನು ಒಡನಾಡಿಯ ಪರಶು ಹಾಗೂ ಸ್ಟ್ಯಾನ್ಲಿ ತಂಡ ಪತ್ತೆ ಮಾಡಿತ್ತು. ನಿರಂತರ ಕಾರ್ಯಾಚರಣೆ ಮಾಡುವ ಮೂಲಕ ಅಪ್ರಾಪ್ತ ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಲ್ಲದೆ, ಆರೋಪಿಗಳನ್ನು ಜೈಲು ಪಾಲಾಗುವಂತೆ ನೋಡಿಕೊಳ್ಳಲಾಗಿತ್ತು. ಇದೀಗ ಅಂತಹುದೇ ಜಾಲ ಪತ್ತೆಯಾಗಿದ್ದು, ದಾಳಿ ನಡೆಸಿ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: