ಕರ್ನಾಟಕಪ್ರಮುಖ ಸುದ್ದಿಮೈಸೂರು

ಮುಡುಕುತೊರೆ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇಗುಲವನ್ನು ಪುನರ್‌ ನಿರ್ಮಾಣಕ್ಕೆ ವಾರದಲ್ಲಿ 10ಕೋ.ರೂ.ಬಿಡುಗಡೆ : ಸಿಎಂ ಬಿಎಸ್ ವೈ ಭರವಸೆ

ಮೈಸೂರು,ನ.26:- ತಿ.ನರಸೀಪುರ ತಾಲೂಕಿನ ತಲಕಾಡು ಪಂಚಲಿಂಗಗಳಲ್ಲಿ ಒಂದಾಗಿರುವ ಮುಡುಕುತೊರೆ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇಗುಲವನ್ನು ಪುನರ್‌ ನಿರ್ಮಾಣ ಮಾಡಲು ವಾರದಲ್ಲಿ 10 ಕೋಟಿ ರೂ.ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದರು.

ಮುಡುಕುತೊರೆ ಗ್ರಾಮದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕಾರ್ಯಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಯಾವುದೇ ವ್ಯಕ್ತಿಯ ಸಾಧನೆ ಮಾತನಾಡಬೇಕೇ ಹೊರತು ಮಾತೇ ಸಾಧನೆ ಆಗಬಾರದು. ಇನ್ನೂ ಎರಡೂವರೆ ವರ್ಷ ನನ್ನ ಅಧಿಕಾರಾವಧಿ ಇದೆ. ಈ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಪೂರ್ಣಗೊಳಿಸುವ ಅಪೇಕ್ಷೆ ಹೊಂದಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

ಗುತ್ತಿಗೆದಾರರು ತಮಗೆ ಎಷ್ಟು ಬರುತ್ತೆ ಎಂದು ಯೋಚನೆ ಮಾಡದೆ ಇನ್ನು ಎರಡು ವರ್ಷಗಳಲ್ಲಿ ಈ ದೇಗುಲ ನಿರ್ಮಿಸಬೇಕು. ನನ್ನ ಅಧಿಕಾರಾವಧಿಯಲ್ಲಿ ಹಣದ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

ದೇವಸ್ಥಾನಗಳ ಅಭಿವೃದ್ಧಿಗೆ ಹಣದ ಕೊರತೆಯಿಲ್ಲ. ದೇವರು ಕೊಟ್ಟಿದ್ದನ್ನು ದೇಗುಲಗಳ ಅಭಿವೃದ್ಧಿಗೆ ನೀಡಲಾಗುವುದು. ಕೆಲ ದಿನಗಳ ಹಿಂದೆ 136 ದೇಗುಲಗಳ ಅಭಿವೃದ್ಧಿಗೆ ತಲಾ 1 ಕೋಟಿ ರೂ.ನಂತೆ 136 ಕೋಟಿ ರೂ.ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು.

ಈ ದೇಗುಲ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 16 ಕೋಟಿ ರೂ. ವೆಚ್ಚ ಮಾಡಲು ಅನುಮೋದನೆ ಸಿಕ್ಕಿದೆ. ಸರ್ಕಾರ ಈಗಾಗಲೇ 5 ಕೋಟಿ ರೂ.ಬಿಡುಗಡೆ ಮಾಡಿದೆ. ಅಲ್ಲದೇ, ಇನ್ನುಳಿದ 11 ಕೋಟಿ ರೂ.ಮೊತ್ತವನ್ನು ಭಕ್ತರಿಂದ ದೇಣಿಗೆ ಸಂಗ್ರಹಿಸಲು ದೇವಾಲಯ ಅಭಿವೃದ್ಧಿ ಸಮಿತಿ ರಚಿಸಲಾಗಿದೆ.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟೊ.ಸೋಮಶೇಖರ್‌ ಪಾಲ್ಗೊಂಡಿದ್ದರು. (ಕೆ.ಎಸ್, ಎಸ್.ಎಚ್)

Leave a Reply

comments

Related Articles

error: