ದೇಶಪ್ರಮುಖ ಸುದ್ದಿ

ಕುಲಭೂಷಣ್ ಜಾದವ್‌ ಪ್ರಕರಣ : ಸಂಸತ್‍ನಲ್ಲಿ ಪಾಕಿಸ್ತಾನದ ವಿರುದ್ಧ ಪಕ್ಷಾತೀತ ಖಂಡನೆ

ನವದೆಹಲಿ: ಭಾರತೀಯ ವ್ಯಾಪಾರಿ ಕುಲಭೂಷಣ್ ಜಾದವ್‍ ಅವರಿಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ಗಲ್ಲು ‍ಶಿಕ್ಷೆ ವಿಧಿಸಿರುವ ಕ್ರಮವನ್ನು ಭಾರತೀಯ ಸಂಸತ್‍ನಲ್ಲಿ ಸದಸ್ಯರು ಪಕ್ಷಾತೀತವಾಗಿ ಖಂಡಿಸಿದ್ದಾರೆ.

ಗಲ್ಲು ಶಿಕ್ಷೆ ವಿಧಿಸಿರುವ ಪ್ರಕರಣ ಲೊಕಸಭೆಯಲ್ಲಿ ಇಂದು ಚರ್ಚೆಗೆ ಬಂದಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಯಿತು. ಸಂಸತ್‍ನಲ್ಲಿ ಪಕ್ಷಾತೀತವಾಗಿ ಪಾಕಿಸ್ತಾನದ ವಿರುದ್ಧ ಖಂಡನೆ ವ್ಯಕ್ತವಾಗಿದ್ದು, ಕುಲಭೂಷಣ್ ರಕ್ಷಣೆಗೆ ಸರ್ಕಾರ ಸಕಲ ಕ್ರಮ ಕೈಗೊಳ್ಳಬೇಕೆಂದು ಎಲ್ಲ ಪಕ್ಷಗಳ ಸದಸ್ಯರೂ ಒತ್ತಾಯಿಸಿದರು.

ಕುಲಭೂಷಣ್ ಜಾಧವ್‌ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿಲುವಳಿ ಸೂಚನೆ ಮಂಡಿಸಿದ್ದಾರೆ. ಪಾಕಿಸ್ತಾನ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ  ಕುಲಭೂಷಣ್ ಯಾದವ್ ಪರವಾಗಿ ಧ್ವನಿ ಎತ್ತಿರುವ ಸಂಸದರು, ಪಾಕ್ ಭಾರತೀಯ ಪ್ರಜೆಯನ್ನು ಅಪಹರಣ ಮಾಡಿದೆ. ಪಾಕಿಸ್ತಾನವನ್ನು ಉಗ್ರರ ಸರ್ಕಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಐಎಂ ಸಂಸದ ಅಸಾವುದ್ದೀನ್ ಓವೈಸಿ ಸಹ ಕುಲಭೂಷಣ್ ಯಾದವ್ ರಕ್ಷಣೆಗೆ ಒತ್ತಾಯಿಸಿದ್ದು, ಪಾಕಿಸ್ತಾನದಲ್ಲಿರುವ ಭಾರತೀಯ ಪ್ರಜೆ ಬದುಕಿ ಉಳಿಯದೇ ಇದ್ದರೆ ಅದು ಸರ್ಕಾರದ ವೈಫಲ್ಯವಾಗಲಿದೆ. ಕುಲಭೂಷಣ್ ಯಾದವ್ ಅವರನ್ನು ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.

ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತೇವೆ : ಗೃಹ ಸಚಿವ ರಾಜನಾಥ್ ಸಿಂಗ್‍

ಸಂಸತ್‍ನಲ್ಲಿ ಮಾತನಾಡಿ ಈ ಕುರಿತು ಹೇಳಿಕೆ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್ ಅವರು,  ಪಾಕಿಸ್ತಾನವು ಕುಲಭೂಷಣ್ ಅವರನ್ನು ಅಕ್ರಮವಾಗಿ ಬಂಧಿಸಿದೆ. ಇರಾನ್‍ನ ಚಾಬಹಾರ್‍ ಬಂದರಿನಿಂದ ಪಾಕ್ ಅಧಿಕಾರಿಗಳು ಅವರನ್ನು ಅಪಹರಿಸಿ, ನಂತರ ಅವರ ಮೇಲೆ ಗೂಢಚರ್ಯದ ಆರೋಪ ಹೊರಿಸಿದೆ. ಆದರೆ ಕುಲಭೂಷಣ್ ಅವರು ನಿರಪರಾಧಿಯಾಗಿದ್ದು, ಅವರಿಗೆ ನ್ಯಾಯ ಒದಗಿಸಿಕೊಡಲು ಕೇಂದ್ರ ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ ಎಂದು ಭರವಸೆ ನೀಡಿದರು.

ಪಾಕಿಸ್ತಾನ ಕುಲ್’ಭೂಷಣ್ ಯಾದವ್ ಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜನಾಥ್ ಸಿಂಗ್, ಪಾಕಿಸ್ತಾನ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಿರಪರಾಧಿಯೊಬ್ಬನಿಗೆ ಗಲ್ಲು ಶಿಕ್ಷೆ ವಿಧಿಸಿದೆ.  ಕುಲ್ ಭೂಷಣ್ ಯಾದವ್ ಅವರನ್ನು ಬಂಧಿಸಿದಾಗ ಅವರಿಗೆ ದೂತಾವಾಸ ಕಚೇರಿಯನ್ನು ಸಂಪರ್ಕಿಸುವ, ಪ್ರವೇಶಿಸುವ ಅವಕಾಶವನ್ನೂ ನೀಡಿರಲಿಲ್ಲ. ಬಂಧಿತ ಕುಲ್ ಭೂಷಣ್ ಯಾದವ್ ಅವರಿಗೆ ದೂತವಾಸ ಕಚೇರಿಯ ಸಂಪರ್ಕ ಕಲ್ಪಿಸುವಂತೆ ಭಾರತ 13 ಬಾರಿ ಕೇಳಿದ್ದರೂ ಸಹ ಅವಕಾಶ ನೀಡದೇ ಜಿನೇವಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದರು.

(ಎನ್‍.ಬಿ.ಎನ್‍)

Leave a Reply

comments

Related Articles

error: