ಮೈಸೂರು

ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಕೈಗೊಂಡು ಹರಡುವ ಕೊರೋನಾಕ್ಕೆ ಕಡಿವಾಣ ಹಾಕಲು ಆರ್.ಶಿವಕುಮಾರ್ ಕರೆ

ಮೈಸೂರು,ನ.26:- ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ನಾವೆಲ್ಲರೂ ಅನುಸರಿಸುವ ಮೂಲಕ ಕೊರೋನಾ ವೈರಾಣು ರೋಗವು ಹರಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಎಎಸ್ಪಿ) ಆರ್.ಶಿವಕುಮಾರ್ ಹೇಳಿದರು.

ತಿ.ನರಸೀಪುರ ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಜಿಲ್ಲಾ ಗೃಹರಕ್ಷಕ ದಳ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕೋವಿಡ್- 19 ಸಾಂಕ್ರಾಮಿಕ ರೋಗ ಹರಡುವಿಕೆಯವನ್ನು ತಡೆಗಟ್ಟುವ ಕುರಿತು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಧರಿಸುವ ಮೂಲಕ ಮಹಾಮಾರಿ ವೈರಾಣು ರೋಗ ಹರಡುವುದನ್ನು ತಡೆಗಟ್ಟಬೇಕು ಎಂದು ಕರೆ ನೀಡಿದರು.
ಕೊರೋನಾ ವೈರಾಣು ರೋಗ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಲು ಜಿಲ್ಲಾ ಗೃಹರಕ್ಷಕ ದಳ ತಾಲೂಕು ಕೇಂದ್ರವಾದ ತಿ.ನರಸೀಪುರ ಪಟ್ಟಣದಲ್ಲಿ ಜಾಥಾವನ್ನು ಹಮ್ಮಿಕೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಮೊದಲು ನಾವುಗಳೇ ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಕೋವಿಡ್ -19 ನಿರ್ಮೂಲನೆಗೆ ಸಾಮೂಹಿಕವಾಗಿ ಹೋರಾಟವನ್ನು ಮಾಡಬೇಕು ಎಂದು ತಿಳಿಸಿದರು.
ನಂತರ ರಸ್ತೆಯಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ ಬೈಕ್ ಸವಾರರ ಬಳಿಗೆ ತೆರಳಿ ಉಚಿತವಾಗಿ ಮಾಸ್ಕ್ ಗಳನ್ನು ವಿತರಿಸುವ ಮೂಲಕ ಎಎಸ್ಪಿ ಆರ್.ಶಿವಕುಮಾರ್ ಅವರು ಗಮನ ಸೆಳೆದರು.
ಗೃಹರಕ್ಷಕ ದಳ ಜಿಲ್ಲಾ ಉಪ ಕಮಾಂಡೆಂಟ್ ಎನ್.ವೆಂಕಟೇಶ್, ಸಮಾಜ ಸೇವಕ ಎಂ.ಮಾದೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಹಿರಿಯ ಗೃಹ ರಕ್ಷಕ ಡಿ.ಮಹದೇವ ಹಾಗೂ ಸಿಬ್ಬಂದಿಗಳು ಜಾಥಾದಲ್ಲಿ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: