
ಮೈಸೂರು
ದಲಿತ ದಾಖಲೀಕರಣ ಕೇಂದ್ರ ,ವಸ್ತು ಸಂಗ್ರಹಾಲಯ ಸ್ಥಾಪನೆಗೆ 6.5 ಕೋಟಿ ರೂ. ವೆಚ್ಚ ಯೋಜನೆ : ವೆಚ್ಚ ಬಿಡುಗಡೆ ಮಾಡುವಂತೆ ಸಚಿವ ಶ್ರೀರಾಮುಲು ಅವರಲ್ಲಿ ಪ್ರೊ.ಹೇಮಂತ್ ಕುಮಾರ್ ಮನವಿ
ಮೈಸೂರು,ನ.26:- ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಗ್ರಂಥಾಲಯ, ದಲಿತ ದಾಖಲೀಕರಣ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯ ಸ್ಥಾಪನೆಗೆ 6.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಹೇಳಿದರು.
ಮೈಸೂರು ವಿವಿ ಅಂಬೇಡ್ಕರ್ ಕೇಂದ್ರದ ವಿಶ್ವಜ್ಞಾನಿ ಸಭಾಂಗಣದಲ್ಲಿ 71ನೇ ಸಂವಿಧಾನ ದಿನದ ಅಂಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ಕೇಂದ್ರದ ಜಾಲತಾಣ ಲೋಕಾರ್ಪಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಸಾಕಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಗ್ರಂಥಾಲಯ, ದಲಿತ ದಾಖಲೀಕರಣ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯ ಸ್ಥಾಪನೆಗೆ 6.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಈ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡುವಂತೆ ಸಚಿವ ಶ್ರೀರಾಮುಲು ಅವರಿಗೆ ಕೋರಿದರು.
ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಪಠ್ಯಕ್ರಮದಿಂದ ಹಿಡಿದು ಜನ ಸಾಮಾನ್ಯರಿಗೆ ಬಾಬಾ ಸಾಹೇಬರ ವಿಚಾರಧಾರೆಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡುತ್ತಿದೆ. ಅಂಬೇಡ್ಕರ್ ಕೇಂದ್ರದ ಎಲ್ಲ ಕಾರ್ಯಕ್ರಮಗಳಿಗೆ ವಿವಿ ಬೆನ್ನೆಲುಬಾಗಿ ನಿಂತಿದೆ ಎಂದರು.
ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ಆಚರಣೆ ಹಾಗೂ ನಡವಳಿಕೆಗಳು ಶ್ರೇಷ್ಠ ಸಂವಿಧಾನದ ಆಶಯಗಳಂತೆ ರೂಪುಗೊಳ್ಳಬೇಕಿದೆ. ಬಾಬಾ ಸಾಹೇಬರು ಬಯಸಿದ್ದ ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಜಾಪ್ರಭುತ್ವವನ್ನು ಎಲ್ಲರೂ ಸೇರಿ ಕಟ್ಟಿಬೆಳೆಸಬೇಕಿದೆ ಎಂದು ಹೇಳಿದರು.
ಸಚಿವರ ಆಗಮನದಿಂದ ಪ್ರಯೋಜನ
ಸಚಿವರಾದ ಶ್ರೀರಾಮುಲು ಅವರು ವಿವಿಗೆ ಆಗಮಿಸಿರುವುದು ಇಲ್ಲಿನ ವಿವಿ, ಅಂಬೇಡ್ಕರ್ ಕೇಂದ್ರ ಸೇರಿದಂತೆ ವಿದ್ಯಾರ್ಥಿಗಳಿಗೂ ಹೆಚ್ಚಿನ ಪ್ರಯೋಜನವಾಗಲಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಶ್ರೀರಾಮುಲು ಅವರು ಸಮಾಜಕ್ಕೆ ಉತ್ತಮ ತಳಪಾಯ ಹಾಕಲು ಶ್ರಮಿಸುತ್ತಿದ್ದಾರೆ. ಇಲಾಖೆ ಮೂಲಕ ಶೋಷಿತರ ಏಳಿಗೆಗೆ ಪೋರಕವಾದ ಯೋಜನೆಗಳನ್ನು ಸಚಿವರು ಮಾಡುತ್ತಿದ್ದಾರೆ ಎಂದರು.
ಜಾಲತಾಣ ರೂಪಿಸಿದ ತಂಡಕ್ಕೆ ಅಭಿನಂದನೆ
ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಅತಿಥಿ ಉಪನ್ಯಾಸಕರಾದ ಅಬ್ದುಲ್ ಕರೀಂ ಅವರ ತಂಡ ರೂಪಿಸಿರುವ ಜಾಲತಾಣದ ಕುರಿತು ಕುಲಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಜನ ಸಾಮಾನ್ಯರಿಗೆ ಅಂಬೇಡ್ಕರ್ ವಿಚಾರಧಾರೆಗಳನ್ನು ತಲುಪಿಸಲು ಈ ವೆಬ್ ತಾಣ ಸಾಕಷ್ಟು ಉತ್ತಮ ವೇದಿಕೆಯಾಗಲಿದೆ ಎಂದು ಹೇಳಿದರು.
ಸಚಿವರಿಂದ ಕಾರ್ಯಕ್ರಮ ಉದ್ಘಾಟನೆ
ಇದಕ್ಕೂ ಮುನ್ನ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಆನ್ ಲೈನ್ ಮೂಲಕ ವಿಶೇಷ ಉಪನ್ಯಾಸ ನೀಡಿದರು. ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಇತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)