ದೇಶಪ್ರಮುಖ ಸುದ್ದಿ

ರೈತರಿಂದ `ದೆಹಲಿ ಚಲೋ’: ಗುಂಪು ಚದುರಿಸಲು ಪೊಲೀಸರಿಂದ ಅಶ್ರುವಾಯು, ಜಲ ಫಿರಂಗಿ ಪ್ರಯೋಗ

ಚಂಡೀಗಢ,ನ.26-ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಚಲೋ ಚಳವಳಿ ಭಾಗವಾಗಿ ಪಂಜಾಬ್ ರೈತರು ಪೊಲೀಸ್ ಬ್ಯಾರಿಕೇಡ್ ಮುರಿದು ಹರ್ಯಾಣ ರಾಜ್ಯ ಪ್ರವೇಶಿಸಲು ಮುಂದಾದ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.

ಪಂಜಾಬ್-ಹರ್ಯಾಣ ಗಡಿಯ ಶಂಭು ಎಂಬಲ್ಲಿ ರೈತರು ಗುಂಪು ಸೇರಿ ದೆಹಲಿ ಚಲೋ ಆರಂಭಿಸಿ ಪೊಲೀಸ್ ಬ್ಯಾರಿಕೇಡ್ ತೆಗೆದು ನುಗ್ಗಲು ಪ್ರಯತ್ನಿಸುತ್ತಿದ್ದರು. ಆಗ ಹರ್ಯಾಣ ಪೊಲೀಸರು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದರು. ಆದರೂ ಪ್ರತಿಭಟನಾಕಾರರು ಕೇಳಲಿಲ್ಲ. ಈ ವೇಳೆ ಹರ್ಯಾಣ-ಪಂಜಾಬ್ ಶಂಭು ಅಂತರಾಜ್ಯ ಗಡಿಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಪ್ರತಿಭಟನಾಕಾರರು ದೆಹಲಿಗೆ ತೆರಳದಂತೆ ಹರ್ಯಾಣ ಪೊಲೀಸರು ಹಲವು ಹಂತಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದರು. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಜನರು ಶಾಂತಿಯುತವಾಗಿ ಪ್ರತಿಭಟನೆ ಮಾಡುವುದನ್ನು ಕಾನೂನಿನ ಮೂಲಕ ಹತ್ತಿಕ್ಕುವಂತಿಲ್ಲ. ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೆವು. ಆದರೆ ನಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಪೊಲೀಸರು ತಡೆಯುತ್ತಿದ್ದಾರೆ ಎಂದರು.

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕರ್ಮಲ್ ಕರ್ನ ಕೆರೆ ಪ್ರದೇಶದಲ್ಲಿ ಸೇರಿದ್ದು ದೆಹಲಿಯತ್ತ ಪಯಣ ಮುಂದುವರಿಸಲು ನಿರತರಾಗಿದ್ದಾರೆ. ಪಂಜಾಬ್-ಹರ್ಯಾಣ ಶಂಭು ಗಡಿಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಸಾವಿರಾರು ರೈತರು ಜಮಾಯಿಸಿದ್ದಾರೆ. ಕೆಲವು ರೈತರು ಕೋಲುಗಳು, ಖಡ್ಗ, ಗದೆಗಳನ್ನು ಹಿಡಿದುಕೊಂಡು ಬ್ಯಾರಿಕೇಡ್ ಗಳನ್ನು ನದಿಗೆ ಎಸೆದರು, ಕಲ್ಲುಗಳನ್ನು ಪೊಲೀಸರತ್ತ ಎಸೆದ ಪ್ರಕರಣಗಳು ನಡೆದವು.

ಗಡಿಯ ಸೇತುವೆ ಮೇಲೆ ಇಂದು ಬೆಳಿಗ್ಗೆ ಎರಡು ಗಂಟೆಗೂ ಹೆಚ್ಚು ಕಾಲ ಪೊಲೀಸರು ಮತ್ತು ರೈತರ ಮಧ್ಯೆ ಘರ್ಷಣೆ, ಕಲ್ಲು ತೂರಾಟ, ಜಲಫಿರಂಗಿ, ಅಶ್ರುವಾಯು ಪ್ರಯೋಗಗಳು ನಡೆದವು. ಬಿಜೆಪಿ ಸರ್ಕಾರವಿರುವ ಹರ್ಯಾಣ ಪ್ರತಿಭಟನಾಕಾರರನ್ನು ದೆಹಲಿಗೆ ಹೋಗಲು ಬಿಡುತ್ತಿಲ್ಲ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: