ಕರ್ನಾಟಕದೇಶಪ್ರಮುಖ ಸುದ್ದಿ

ದೇವನಹಳ್ಳಿ ಇಟ್ಟಿಗೆ ಕಾರ್ಖಾನೆಯಲ್ಲಿ ಹಿಂಸೆ ಅನುಭವಿಸುತ್ತಿದ್ದ 118 ಜೀತದಾಳುಗಳ ರಕ್ಷಣೆ

ಬೆಂಗಳೂರು : ರಾಜ್ಯ ಪೊಲೀಸ್ ‘ಮಾನವ ಕಳ್ಳಸಾಗಣೆ ವಿರೋಧಿ ಘಟಕ’ವು ಬೆಂಗಳೂರಿನ ದೇವನಹಳ್ಳಿ ಬಳಿಯಲ್ಲಿರುವ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಹಿಂಸೆ ಅನುಭವಿಸುತ್ತಿದ್ದ 118 ಮಂದಿ ಜೀತದಾಳುಗಳನ್ನು ರಕ್ಷಿಸಿದ್ದಾರೆ. ಇವರಲ್ಲಿ 37 ಮಂದಿ ಬಾಲ ಕಾರ್ಮಿಕರು ಎಂದು ತಿಳಿದುಬಂದಿದೆ.

ಕಳೆದ ಆರು ತಿಂಗಳ ಹಿಂದೆ 150 ಮಂದಿ ಕಾರ್ಮಿಕರನ್ನು ಒಡಿಶಾದಿಂದ ಮಾನವ ಕಳ್ಳಸಾಗಣೆದಾರರ ವಂಚನೆ ಮೂಲಕ ಬೆಂಗಳೂರಿಗೆ ಕರೆತಂದು ಜೀತದ ಕೂಪಕ್ಕೆ ತಳ್ಳಲಾಗಿತ್ತು ಎಂದು ಗೊತ್ತಾಗಿದೆ. ಮಾನವ ಕಳ್ಳಸಾಗಣೆ ನಡೆಸುವ ವ್ಯಾಪಾರಿಯು ಇವರಿಗೆ ಬೆಂಗಳೂರಿನಲ್ಲಿ ಉತ್ತಮ ವೇತನ ಮತ್ತು ವಸತಿ ವ್ಯವಸ್ಥೆ ಕೊಡಿಸುವುದಾಗಿ ನಂಬಿಸಿ ಕರೆತಂದಿದ್ದರು. ನಂತರ ಅವರನ್ನು ಇಟ್ಟಿಗೆ ಕಾರ್ಖಾನೆ ಮಾಲೀಕರಿಗೆ ಮಾರಿ ತನ್ನ ಜೇಬು ತುಂಬಿಸಿಕೊಂಡಿದ್ದ.

ಈ ಕಾರ್ಮಿಕರಿಗೆ ದಿನಕ್ಕೆ 14 ರಿಂದ 16 ಗಂಟೆಗಳ ಕಾಲ ವಾರಕ್ಕೆ ಕೇವಲ 350 ರೂಪಾಯಿ ವೇತನ ಕೊಡಿಸಿ ಕೆಲಸ ಮಾಡಿಸಲಾಗುತ್ತಿತ್ತು. ದಿನಕ್ಕೆ ಎರಡು ಹೊತ್ತು ಮಾತ್ರ ಊಟ ನೀಡಲಾಗುತ್ತಿತ್ತು. ಕಾರ್ಮಿಕರು ಸಂಬಳ ಕೇಳಿದರೆ ಯಾವಾಗಲೋ ಒಮ್ಮೆ ವೇತನ ನೀಡಲಾಗುತ್ತಿತ್ತು. ಕೂಲಿ ಮಾಡಲು ನಿರಾಕರಿಸಿದರೆ ಅವರನ್ನು ಹೊಡೆದು ಹಿಂಸೆ ನೀಡಲಾಗುತ್ತಿತ್ತು. ರಜೆಯನ್ನೂ ನೀಡುತ್ತಿರಲಿಲ್ಲ. ಸಣ್ಣ ತಾತ್ಕಾಲಿಕ ಶೆಡ್‍ನಲ್ಲಿ ಅವರಿಗೆ ಆಶ್ರಯ ನೀಡಲಾಗುತ್ತಿತ್ತು. ಬಾಲ ಕಾರ್ಮಿಕರು ಇಟ್ಟಿಗೆ ತಯಾರಿಸಲು ಮರಳನ್ನು ಹೊರಬೇಕಾಗುತ್ತಿತ್ತು. ತಮ್ಮ ಕುಟುಂಬದವರಿಗೆ ತೊಂದರೆ ನೀಡಬಹುದು ಎಂಬ ಭಯದಿಂದ ಕೆಲವು ಕಾರ್ಮಿಕರು ಓಡಿಹೋಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ಕಾರ್ಮಿಕರು ಇಲ್ಲಿಂದ ತಪ್ಪಿಸಿಕೊಂಡು ಹೋಗಿ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಖಾನೆ ಮಾಲೀಕರ ವಿರುದ್ಧ ಕೇಸು ದಾಖಲಿಸಲಾಗಿದ್ದು ಆತ ಪರಾರಿಯಾಗಿದ್ದಾನೆ. ಕಳ್ಳಸಾಗಣೆ ವ್ಯಾಪಾರದಲ್ಲಿ ತೊಡಗಿರುವವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಬಡ ಜನರನ್ನು ಶೋಷಣೆಗೊಳಪಡಿಸಿ ಕಳ್ಳಸಾಗಣೆದಾರರು ಕಮಿಷನ್ ಹೆಸರಿನಲ್ಲಿ ಹಣ ಮಾಡುತ್ತಿದ್ದಾರೆ. ಇಂಥವರ ಬಗ್ಗೆ ಜನತೆ ಎಚ್ಚರದಿಂದ ಇರಬೇಕು ಎಂದು ಮೂಲಗಳು ತಿಳಿಸಿವೆ.

(ಎನ್‍.ಬಿ.ಎನ್‍)

Leave a Reply

comments

Related Articles

error: