ಮೈಸೂರು

ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕೊಡಿಸಿದ ಐಜಿಪಿ ವಿಫುಲ್ ಕುಮಾರ್

ಮೈಸೂರು,ನ.27:- ಅಪಘಾತದಲ್ಲಿ ತೀವ್ರ ಗಾಯಗೊಂಡು ರಕ್ತಸ್ರಾವದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯೋರ್ವರನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್ ಮಾನವೀಯತೆ ಮೆರೆದಿದ್ದಾರೆ.
ಮೈಸೂರು ತಾಲೂಕು ಆಯರಹಳ್ಳಿ ಗ್ರಾಮದ ಶಿಕ್ಷಕ ರಂಗಸ್ವಾಮಿ ಅವರು ಮೈಸೂರಿನ ಸಿದ್ದಾರ್ಥನಗರ ರಿಂಗ್ ರಸ್ತೆ ಮೂಲಕ ತಮ್ಮ ಬೈಕಿನಲ್ಲಿ ಗ್ರಾಮಕ್ಕೆ ತೆರಳುವ ವೇಳೆ ದೊಡ್ಡ ಆಲದಮರದ ಬಳಿ ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಬಿದ್ದ ರಭಸಕ್ಕೆ ತಲೆಗೆ ಗಂಭೀರವಾಗಿ ಗಾಯವಾಗಿ ರಕ್ತ ಸುರಿಯಲಾರಂಭಿಸಿದೆ. ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟದಿಂದ‌ ಮೈಸೂರಿನ ಕಡೆಗೆ ಆಗಮಿಸುತ್ತಿದ್ದ ವಿಫುಲ್‌ ಕುಮಾರ್ ಅವರು ಅಪಘಾತವನ್ನು ಗಮನಿಸಿ ಕಾರನ್ನು ನಿಲ್ಲಿಸಿದ್ದಾರೆ. ಜೊತೆಗೆ ಸ್ಥಳೀಯರ ನೆರವಿನಿಂದ ತೀವ್ರ ರಕ್ತಸ್ರಾವದಿಂದ ನೋವಿನಿಂದ ನರಳಾಡುತ್ತಿದ್ದ ವ್ಯಕ್ತಿಯನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.
ಪೆಟ್ಟಾಗಿದ್ದ ಶಿಕ್ಷಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಐಜಿಪಿ ವಿಫುಲ್ ಕುಮಾರ್ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದವನ‌ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಹ್ಯಾಟ್ಸಾಫ್‌ ಹೇಳುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: