ಮೈಸೂರು

ನ.30 : ಮೈಸೂರು ಶ್ರೀ ಸುತ್ತೂರು ಮಠದಲ್ಲಿ ಬೆಳದಿಂಗಳ ಸಂಗೀತ ಸಹೋದರಿಯರಿಂದ ದ್ವಂದ್ವ ಗಾಯನ

ಮೈಸೂರು,ನ.27:- ಮೈಸೂರಿನ ಸುತ್ತೂರು ಶ್ರೀಮಠದಲ್ಲಿ 30.11.2020 ಸೋಮವಾರ ಸಂಜೆ 6 ಗಂಟೆಗೆ ಬೆಳದಿಂಗಳ ಸಂಗೀತ-224ರ ಅಂಗವಾಗಿ ದ್ವಂದ್ವ ಗಾಯನವನ್ನು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮ ಡಿಜಿಟಲ್ ಮಾಧ್ಯಮದ ಮೂಲಕ ನಡೆಯಲಿದೆ.
ಚಿಲಕುಂದ ಸೋದರಿಯರು ಎಂದು ಸಂಗೀತ ಕ್ಷೇತ್ರದಲ್ಲಿ ಖ್ಯಾತರಾಗಿರುವ ವಿದುಷಿ ಲಕ್ಷ್ಮಿ ನಾಗರಾಜ್ ಮತ್ತು ವಿದುಷಿ ಇಂದು ನಾಗರಾಜ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತಗಳೆರಡರಲ್ಲೂ ಸಮಾನ ಪ್ರಭುತ್ವ ಸಾಧಿಸಿದ್ದಾರೆ. ಸಂಗೀತದ ಕೌಟುಂಬಿಕ ಹಿನ್ನೆಲೆಯುಳ್ಳ ಇವರಿಗೆ ಅಜ್ಜಿ ವಿದುಷಿ ಸಿ.ಎಸ್. ಸತ್ಯಲಕ್ಷ್ಮಿಯವರು ಮೊದಲ ಗುರುಗಳು. ಪ್ರಸ್ತುತ ತಂದೆ ವಿದ್ವಾನ್ ಸಿ.ಎ. ನಾಗರಾಜ್ ಅವರ ಬಳಿ ಉನ್ನತ ಸಂಗೀತ ಸಾಧನೆ ಮಾಡುತ್ತಿದ್ದಾರೆ.
ಗುಂಡ್ಲುಪೇಟೆಯಲ್ಲಿ ಮೊದಲನೆಯ ಕಾರ್ಯಕ್ರಮ ನೀಡಿದಾಗ ಲಕ್ಷ್ಮಿಗೆ 7 ವರ್ಷ, ಇಂದುವಿಗೆ 5 ವರ್ಷಗಳು. ಆ ನಂತರ ನಿರಂತರವಾಗಿ ಸಂಗೀತ ಪಥದಲ್ಲಿ ಸಾಧನೆ. ದೇಶದ ಉದ್ದಗಲಕ್ಕೂ ಕಾರ್ಯಕ್ರಮಗಳನ್ನು ನೀಡಿರುವ ಇವರು ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಸಿ. ಅಶ್ವತ್ಥ್ ಮುಂತಾದವರ ಜೊತೆಗೂಡಿ ಎಲ್ಲ ರೀತಿಯ ಹಾಡುಗಳನ್ನೂ ಪ್ರಸ್ತುತ ಪಡಿಸಿದ್ದಾರೆ. ಪ್ರಖ್ಯಾತ ಸಂಗೀತ ನಿರ್ದೇಶಕರ ಹಲವಾರು ಆಲ್ಬಂಗಳಲ್ಲಿ ಹಾಡಿದ್ದಾರೆ. “ಎದೆ ತುಂಬಿ ಹಾಡುವೆನು” ಸ್ಪರ್ಧೆ, ಕರ್ನಾಟಕ ಕಿಶೋರ ಪ್ರತಿಭಾ ಪುರಸ್ಕಾರ, ಫಿಲಂ ಫೇರ್ ಪ್ರಶಸ್ತಿ ಮತ್ತು ಆರ್ಯಭಟ ಮೊದಲಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿಗಳ “ಎ” ಶ್ರೇಣಿಯ ಕಲಾವಿದರಾಗಿದ್ದಾರೆ. ಮೈಸೂರು ಅರಮನೆ, ಬೆಂಗಳೂರು ಹಬ್ಬ, ತಿರುಪತಿಯ ನಾದನೀರಾಜನಂ, ಹಂಪಿ ಉತ್ಸವ ಮೊದಲಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ವಯೋಲಿನ್ ಸಹಕಾರ ನೀಡುತ್ತಿರುವ ವಿದ್ವಾನ್ ಮತ್ತೂರು ಶ್ರೀನಿಧಿಯವರು ವಿದ್ವಾನ್ ಆರ್.ಆರ್. ಕೇಶವಮೂರ್ತಿಯವರಲ್ಲಿ ಪಿಟೀಲು ವಾದನವನ್ನು ಮತ್ತು ಆರ್.ಎನ್. ತ್ಯಾಗರಾಜನ್ ಅವರಲ್ಲಿ ಶಾಸ್ತ್ರೀಯ ಗಾಯನವನ್ನು ಅಭ್ಯಸಿಸಿದ್ದಾರೆ. ಮದರಾಸ್ ವಿಶ್ವವಿದ್ಯಾನಿಲಯದ ಎಂ.ಮ್ಯೂಸಿಕ್ ಪದವೀಧರರು. ಅನನ್ಯ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರು. ಆಕಾಶವಾಣಿ ಮತ್ತು ದೂರದರ್ಶನದ “ಎ” ಶ್ರೇಣಿ ಕಲಾವಿದರು. ಯೂರೋಪ್ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸಿ ಅಲ್ಲೆಲ್ಲ ತಮ್ಮ ನಾದಸುಧೆಯನ್ನು ಪಸರಿಸಿದ್ದಾರೆ.
ಮೃದಂಗ ಪಕ್ಕವಾದ್ಯ ನೀಡುತ್ತಿರುವ ವಿದ್ವಾನ್ ಸಿ.ಎಸ್. ಕೇಶವದತ್ ಅವರು ವಿದ್ವಾನ್ ಪಿ.ಜಿ. ಲಕ್ಷ್ಮೀನಾರಾಯಣ್ ಅವರಲ್ಲಿ ಮೃದಂಗ ವಾದನದ ಮೊದಲ ಪಾಠಗಳನ್ನು ಕಲಿತರು. ಅನಂತರ ವಿ.ಎಸ್. ರಮೇಶ್ ಅವರಲ್ಲಿ, ಪ್ರಸ್ತುತ ತುಮಕೂರು ಬಿ. ರವಿಶಂಕರ್ ಅವರಲ್ಲಿ ಶಿಷ್ಯವೃತ್ತಿ ಮಾಡುತ್ತಿದ್ದಾರೆ. ಅರಮನೆಯ ಪ್ರಧಾನ ವೇದಿಕೆ, ತಿರುಪತಿಯ ನಾದನೀರಾಜನ ಮತ್ತು ಮೈಸೂರಿನ ನಾದಬ್ರಹ್ಮ ಸಂಗೀತ ಸಭೆಯ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುತ್ತಾರೆ. ತಂದೆ ಸಿ.ಎ. ನಾಗರಾಜ್ ಅವರ ಬಳಿ ಕೊಳಲು ವಾದನವನ್ನೂ ಕಲಿತಿರುವ ಪ್ರತಿಭಾವಂತರು, ಎಂಬಿಎ ಪದವೀಧರರು.
ಘಟಂ ವಾದನದ ಸಹಕಾರ ನೀಡಲಿರುವ ಮೈಸೂರಿನವರೇ ಆದ ವಿದ್ವಾನ್ ಎಸ್. ಮಂಜುನಾಥ್ ಅವರು ವಿದ್ವಾನ್ ಟಿ. ಭದ್ರಾಚಾರ್ ಮತ್ತು ವಿದ್ವಾನ್ ತುಮಕೂರು ಬಿ. ರವಿಶಂಕರ್ ಅವರ ಬಳಿ ಕಳೆದ ಎರಡು ದಶಕಗಳಿಂದ ಘಟಂ ಮತ್ತು ಮೃದಂಗ ಲಯವಾದ್ಯ ನುಡಿಸುವಿಕೆಯನ್ನು ಕಲಿತಿದ್ದಾರೆ. ಹಲವಾರು ಸಿ.ಡಿ.ಗಳಲ್ಲಿ ತಮ್ಮ ಕಲಾಪ್ರದರ್ಶನ ಮಾಡಿರುವ ಇವರು ಜೆಎಸ್ಎಸ್ ಸಂಸ್ಥೆಯ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Yotube http://Youtube.com/c/JSSMahavidyapeethaonline https://www.facebook.com/JSSMVP http://jssonline.org ಲಿಂಕ್ಗಳ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: