ಮೈಸೂರು

ಸರ್ಕಾರ ರೈತರ ಸಾಲಮನ್ನಾ ಮಾಡದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ : ಕೆ.ಎಸ್.ಪುಟ್ಟಣ್ಣಯ್ಯ

ಸಕಾಲಕ್ಕೆ ಸಮರ್ಪಕ ಮಳೆಯಾಗದೆ ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ರಾಜ್ಯ ಸರ್ಕಾರ ಸಾಲಮನ್ನಾ ಮಾಡುವುದನ್ನು ಬಿಟ್ಟು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ದುರದೃಷ್ಟಕರ ಎಂದು ಶಾಸಕ ಹಾಗೂ ರೈತ ಮುಖಂಡ ಕೆ.ಎಸ್ ಪುಟ್ಟಣ್ಣಯ್ಯ ಬೇಸರಿಸಿದರು.
ಮಂಗಳವಾರ ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಜಾನಪದ ವಿಭಾಗದ ಸಹಯೋಗದಲ್ಲಿ ನೆಲೆ ಹಿನ್ನಲೆ ಸಂಸ್ಥೆ ವತಿಯಿಂದ ಉಳುವ ಯೋಗಿ ಶ್ರಮ ಸಂಸ್ಕೃತಿ ಪರಿಕಲ್ಪನೆಯೊಂದಿಗೆ ಆಯೋಜಿಸಿರುವ ಒಂದು ತಿಂಗಳ ರಂಗತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ಯಮಿಗಳ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡುವ ಸರ್ಕಾರಗಳು ದೇಶದ ಬೆನ್ನೆಲುಬಾದ ರೈತರ ಸಾಲಮನ್ನಾ ಮಾಡಲು ಮೀನಮೇಷ ಎಣಿಸುತ್ತಿವೆ. ತೀವ್ರ ಬರಗಾಲದಿಂದ ಸಾಲಸೋಲ ಮಾಡಿ ಹಾಕಿದ ಬೆಳೆ ಕೈಗೆ ಸಿಗದೆ ಪರಿತಪಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳ ಹಾವಳಿ ತಪ್ಪಿಲ್ಲ. ರೈತರ ಸಾಲಮನ್ನಾ ಮಾಡಿ ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಕಾರ್ಯವನ್ನು ಆಳುವ ಸರ್ಕಾರಗಳು ಮಾಡುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಇದಕ್ಕೆ ಪರ್ಯಾಯವಾಗಿ ಸಮ ಸಂಸ್ಕೃತಿಯಿಂದ ಕೃಷಿನಿಧಿ ಸ್ಥಾಪಿಸುವ ಕುರಿತು ಚಿಂತಿಸುವ ಅಗತ್ಯತೆ ಇದೆ ಎಂದು ಹೇಳಿದರು.
ಇದೇ ವೇಳೆ ಪ್ರಗತಿ ಪರ ರೈತರಾದ ಕೆ.ಎಸ್. ಇಂದಿರಮ್ಮ, ಶ್ರೀನಿವಾಸ ಮೂರ್ತಿ ಮತ್ತು ವಿ.ಗೀತಾ, ಸೈಯದ್ ಘಾನೀಖಾನ್, ಸಮಿದಾ ಫಿರ್ದೊಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನೆಲೆ ಹಿನ್ನೆಲೆ ಸಂಸ್ಥೆಯ ನಿರ್ದೇಶಕ ಜನಾರ್ದನ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಜಾನಪದ ವಿಭಾಗದ ಮುಖ್ಯಸ್ಥ ಹಾಗೂ ಶಿಬಿರದ ನಿರ್ದೇಶಕ ಡಾ.ನಂಜಯ್ಯ ಹೊಂಗನೂರು, ಶಿಬಿರದ ಸಂಚಾಲಕ ಕೆ.ಆರ್ ಕೃಷ್ಣಕುಮಾರ್, ಪಿ. ಸೋಮಶೇಖರ್, ಶ್ರೀಧರ್, ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.  (ಬಿ.ಎಂ-ಎಸ್.ಎಚ್)

Leave a Reply

comments

Related Articles

error: