ಮೈಸೂರು

15ಕೋ.ರೂ.ವಸೂಲಾತಿ ಮೂರು ತಿಂಗಳೊಳಗೆ ಮುಗಿಸಿ : ಸಾ.ರಾ.ಮಹೇಶ್ ಸೂಚನೆ

ವಿಧಾನ ಸಭೆಯ ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷ ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ಮಂಗಳವಾರ ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದ ಕೌನ್ಸಿಲ್ ಹಾಲ್‍ನಲ್ಲಿ ಸಭೆ ನಡೆಯಿತು.
ಮೈಸೂರು ವಿಶ್ವವಿದ್ಯಾನಿಲಯದ ಲೆಕ್ಕ ಪರಿಶೋಧನ ವರದಿಗಳನ್ನು ವಿಧಾನ ಮಂಡಲಕ್ಕೆ ಸಲ್ಲಿಸದಿರುವ ಹಾಗೂ ಸಲ್ಲಿಸುವಲ್ಲಿ ಆಗಿರುವ ವಿಳಂಬದ ಬಗ್ಗೆ ಚರ್ಚಿಸುವ ಸಂಬಂಧ ಸಭೆ ನಡೆಸಿದ್ದು ಸಭೆಯಲ್ಲಿ ಹಲವು ಅಚ್ಚರಿಯ ವಿಷಯಗಳು ಬೆಳಕಿಗೆ ಬಂದವು. ಮೈಸೂರು ವಿಶ್ವವಿದ್ಯಾಲಯ ದೇಶದ ಉನ್ನತ ವಿವಿಗಳಲ್ಲಿ ಒಂದಾಗಿದ್ದು, ಶತಮಾನೋತ್ಸವವನ್ನು ಸಹ ಆಚರಿಸಿಕೊಂಡಿದೆ. ವಿಶ್ವವಿದ್ಯಾಲಯದ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದ್ದು 1989ರಿಂದೀಚೆಗೆ ಬಿಡುಗಡೆ ಮಾಡಿರುವ ಸುಮಾರು 120 ಕೋಟಿಗೆ ಲೆಕ್ಕಪತ್ರವೇ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದ್ದು ಸಮಿತಿಯ ಸದಸ್ಯರನ್ನು ಆಶ್ಚರ್ಯಗೊಳಿಸಿದೆ.
ಸಮಿತಿಯ ಅಧ್ಯಕ್ಷ ಶಾಸಕ ಸಾ.ರಾ.ಮಹೇಶ್ ಈ ವಿಷಯ ಕೇಳಿ ಒಂದರೆಗಳಿಗೆ ಗಾಬರಿಯಾದರು. ಇಷ್ಟು ದೊಡ್ಡ ಮೊತ್ತಕ್ಕೆ ಲೆಕ್ಕಪತ್ರವೇ ಇಲ್ಲದಿರುವುದನ್ನು ನೋಡಿ ಬೆಚ್ಚಿಬಿದ್ದರು. ಬಳಿಕ ಲೆಕ್ಕಪತ್ರ ಇಲ್ಲದಿರುವ 120 ಕೋಟಿ ರೂಗೆ ಶೀಘ್ರದಲ್ಲೇ ಆಕ್ಷೇಪಣೆಗಳನ್ನು ಸರಿ ಮಾಡಿಕೊಂಡು ಲೆಕ್ಕ ನೀಡುವಂತೆ ಸೂಚಿಸಿದ ಅವರು, ಗುತ್ತಿಗೆಯಲ್ಲಿ ಬಯಲಾಗಿರುವ 15 ಕೋಟಿ ರೂ ವಸೂಲಾತಿ ಮಾಡಲು 3 ತಿಂಗಳ ಗಡುವು ನೀಡಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಕೃಷ್ಣರೆಡ್ಡಿ, ಮುನಿರಾಜು, ರಘು ಆಚಾರ್, ಶಾಂತನಗೌಡ, ವಿಧಾನ ಪರಿಷತ್ ಸದಸ್ಯ ರವಿ ಪಾಟೀಲ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೀದ್ ಅಖ್ತರ್, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್, ಹಣಕಾಸು ಅಧಿಕಾರಿ ಪ್ರೊ.ಬಿ.ಮಹದೇವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: