ಮೈಸೂರು

ಎಲ್ಲರೂ ಒಂದೇ ಎಂಬ ಭಾವ ಬೆಳೆಸುತ್ತಿರುವ ಚಿಣ್ಣರಮೇಳ : ಕುಣಿದು ಕುಪ್ಪಳಿಸುತ್ತಿರುವ ಚಿಣ್ಣರು

ಬೆವರಿಳಿಸಿ ಗಳಿಸಿದ ಒಂದು ಕಾಸು, ಸಿಕ್ಕ ಭತ್ತಕ್ಕೆ ಮಿಗುಲೆಂಬುದು ಕಲಿಸು, ಜ್ಞಾನನೀಡು ಗುರುವೇ, ಕಲಿಸು ನೀ ಕಲಿಸು, ಕಲಿಸು ನೀ ಕಲಿಸು, ಕಲಿಸು ನೀ ಕಲಿಸು…
ಶ್ರಮಪಟ್ಟು ಬೆವರಿಳಿಸಿ ಗಳಿಸಿದ ಹಣದ ಮಹತ್ವವನ್ನು ಸಾರುವ ಹಾಡು ವನರಂಗದಲ್ಲಿ ಮಾರ್ದನಿಸುತ್ತಿತ್ತು. ವೇದಿಕೆಯಲ್ಲಿ ತರಬೇತುದಾರರು ಹಾಡುತ್ತಿದ್ದರೆ ಮುಂಭಾಗದಲ್ಲಿ ಕುಳಿತಿದ್ದ ಚಿಣ್ಣರು ಹಾಡಿಗೆ ತಾಳಸೇರಿಸಿ ಲಯಬದ್ಧವಾಗಿ ಹಿಂಬಾಲಿಸುತ್ತಿದ್ದರು.
ಸಮಾನತೆ ಹೆಸರಿನಲ್ಲಿ ರಂಗಾಯಣದಲ್ಲಿ ಆರಂಭಗೊಂಡಿರುವ ಚಿಣ್ಣರ ಮೇಳದ 2ನೇ ದಿನವಾದ ಮಂಗಳವಾರ ಕಂಡು ಬಂತು. ಮಕ್ಕಳಲ್ಲಿ ಸಾಂಸ್ಕೃತಿಕ ಮನಸ್ಥಿತಿ, ಪರಿಸರದ ಬಗ್ಗೆ ಜಾಗೃತಿ ಹಾಗೂ ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಚಿಣ್ಣರ ಮೇಳ ಮಕ್ಕಳಲ್ಲಿ ಲಿಂಗತಾರತಮ್ಯವಿಲ್ಲದೆ ಎಲ್ಲರೂ ಸಮಾನರು ಎಂಬ ಮನೋಭಾವದಲ್ಲಿ ಬೆರೆಯುವ ವಾತಾವರಣ ಸೃಷ್ಟಿಸಿತು. ರಂಗಾಯಣ ಆವರಣದಲ್ಲಿ ಸಿದ್ಧವಾಗಿರುವ 10 ವೇದಿಕೆಗಳಲ್ಲೂ ಮಕ್ಕಳ ಕಲರವ ಕೇಳಿಬಂತು.
ಮಕ್ಕಳಲ್ಲಿ ನವೋಲ್ಲಾಸ ಮೂಡಿಸುವ ಸಲುವಾಗಿ ಯೋಗಾಸನ ಮಾಡಿಸಲಾಯಿತು. ಎಲ್ಲಾ ಮಕ್ಕಳು ಒಂದೆಡೆ ಸೇರಿ ಸಾಮೂಹಿಕ ಯೋಗಾಭ್ಯಾಸ ಮಾಡುವ ಮೂಲಕ ದೇಹಕ್ಕೆ ಹೊಸ ಚೈತನ್ಯ ತಂದುಕೊಂಡರು. ಬಳಿಕ ರೈತ ಗೀತೆ, ಸಮಾನತೆ ಸಾರುವ ಹಾಗೂ ಶಿಸ್ತನ್ನು ಮೂಡಿಸುವ ಹಾಡುಗಳನ್ನು ಹೇಳಿಕೊಡಲಾಯಿತು. ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ತರಳಿ ಸಂತೋಷದಿಂದ ಕಾಲಕಳೆಯುವ ಅವಕಾಶವಂಚಿತ ಮಕ್ಕಳಿಗೆ ಅಜ್ಜಿ ಮನೆಯ ವಾತಾವರಣ ಸೃಷ್ಟಿಸಲಾಗಿತ್ತು. ಮೈಸೂರಲ್ಲದೆ ಮುಂಬೈ, ಒರಿಸ್ಸಾ, ಉತ್ತರ ಪ್ರದೇಶ, ಹಾಸನ, ನಂಜನಗೂಡಿನಿಂದ ಬಂದಿರುವ ಚಿಣ್ಣರು ಆಟೋಟ, ಹಾಡು, ನೃತ್ಯ, ನಾಟಕಾಭಿನಯ ಸೇರಿದಂತೆ ಎಲ್ಲಾ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಭಾಗವಹಿಸಿ ಕುಣಿದುಕುಪ್ಪಳಿಸಿದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: