ಕರ್ನಾಟಕದೇಶಪ್ರಮುಖ ಸುದ್ದಿ

ರಾತ್ರಿ 8 ಗಂಟೆಯೊಳಗೆ ಹಾಸ್ಟೆಲ್‍ಗೆ ಮರಳುವಂತೆ ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ತಾಕೀತು

ಬೆಂಗಳೂರು: ರಾತ್ರಿ 8 ಗಂಟೆಯೊಳಗೆ ವಿದ್ಯಾರ್ಥಿಗಳು ಹಾಸ್ಟೆಲ್‍ಗೆ ಮರಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ನಿಯಮ ವಿಧಿಸಿ ಆದೇಶ ಹೊರಡಿಸಿದೆ.

ವಿವಿಯ ಕ್ಯಾಂಪಸ್ ಹಾಸ್ಟೆಲ್ ವಿದ್ಯಾರ್ಥಿಗಳು ರಾತ್ರಿ 8 ಗಂಟೆಯೊಳಗೆ ತಮ್ಮ ಕೊಠಡಿಗೆ ಸೇರಬೇಕು. ಹಿರಿಯ ವಿದ್ಯಾರ್ಥಿಗಳು ರಾತ್ರಿ ತಡವಾಗಿ ಬಂದು ಗಲಾಟೆ ಮಾಡುತ್ತಾರೆ ಎಂದು ಕಿರಿಯ ವಿದ್ಯಾರ್ಥಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ವಿವಿ ಅಧಿಕಾರಿಗಳು, ವಿಭಾಗೀಯ ಮುಖ್ಯಸ್ಥರು ಮತ್ತು ವಾರ್ಡ್‍ನ್‍ಗಳ ಒಟ್ಟಾಗಿ ಸೇರಿ ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ.

ಎಲ್ಲರೂ ರಾತ್ರಿ 8 ಗಂಟೆಯೊಳಗೆ ತಲುಪಬೇಕು. ವಿಶ್ವವಿದ್ಯಾಲಯದ ಮೂಲಗಳ ಪ್ರಕಾರ, ಹೊಸ ಕಾಲಾವಧಿ ಮೇ ತಿಂಗಳಿನಿಂದ ಜಾರಿಗೆ ಬರಲಿದ್ದು 8 ಗಂಟೆಯ ನಂತರ ಬಂದರೆ ಹಾಸ್ಟೆಲ್ ಒಳಗೆ ಬಿಡುವುದಿಲ್ಲ. ಪ್ರವೇಶ ನೀಡಬೇಕಾದರೆ ದಂಡ ಕಟ್ಟಬೇಕಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್‍ನಿಂದ ಅನುಮತಿ ಪಡೆಯಬೇಕು ಎಂಬ ನಿಯಮ ವಿಧಿಸಲಾಗಿದೆ.

ಇದಲ್ಲದೆ ಪ್ರವೇಶಾತಿ ಸಂದರ್ಭದಲ್ಲೇ ವಿದ್ಯಾರ್ಥಿಗಳು ಹಾಸ್ಟೆಲ್‍ಗೆ ರಾತ್ರಿ 8 ಗಂಟೆಯೊಳಗೆ ತಲುಪುವುದಾಗಿ ಬರೆದು ಕೊಡಬೇಕು. ಅದಕ್ಕೆ ಪೋಷಕರು ಸಹಿ ಹಾಕಬೇಕು ಎಂಬ ನಿಯಮ ಜಾರಿಗೊಳಿಸಲು ನಿರ್ಧರಿಸಲಾಯಿತು.

ವಿಶ್ವವಿದ್ಯಾಲಯದ ಪ್ರಭಾರ ಉಪ ಕುಲಪತಿ ಪ್ರೊ. ಮುನಿರಾಜು ಅವರು ಈ ಬಗ್ಗೆ ಮಾತನಾಡಿ, ಹಾಸ್ಟೆಲ್‍ನ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸಭೆ ಕರೆದಿದ್ದೆವು. ವಿದ್ಯಾರ್ಥಿಗಳಿಗೆ ಅವಶ್ಯವಿದ್ದರೆ ಗ್ರಂಥಾಲಯವನ್ನು ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತೇವೆ. ವಿದ್ಯಾರ್ಥಿಗಳೆಲ್ಲರೂ ರಾತ್ರಿ 8 ಗಂಟೆಯೊಳಗೆ ಹಾಸ್ಟೆಲ್ ಗೆ ತಲುಪಬೇಕಾಗಿದ್ದು, 10 ಗಂಟೆಯೊಳಗೆ ಊಟ ಮುಗಿಸಬೇಕು. ಊಟದ ಅವಧಿ ಮುಗಿದ ನಂತರ ಬಂದರೆ ಊಟ ಸಿಗುವುದಿಲ್ಲ. ಹಾಸ್ಟೆಲ್‍ನಲ್ಲಿ ಶಿಸ್ತು ಕಾಪಾಡುವ ದೃಷ್ಟಿಯಿಂದ ಈ ನಿಯಮಗಳನ್ನು ಅಳವಡಿಸಲು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

(ಎನ್‍.ಬಿ.ಎನ್‍)

Leave a Reply

comments

Related Articles

error: