ಮೈಸೂರು

ಸ್ಮಾರಕಗಳನ್ನು ಉಳಿಸಿ ಸಂರಕ್ಷಿಸಬೇಕಾದ ಅಗತ್ಯವಿದೆ : ಎಸ್.ಸುಬ್ಬರಾಮನ್

ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸುವ ಸಲುವಾಗಿ ಸ್ಮಾರಕಗಳನ್ನು ಉಳಿಸಿ ಸಂರಕ್ಷಣೆ ಮಾಡಬೇಕಾದ ಅಗತ್ಯತೆ ಇದೆ ಎಂದು ನಿವೃತ್ತ ಪುರಾತತ್ವ ರಸಾಯನಶಾಸ್ತ್ರಜ್ಞ ಎಸ್.ಸುಬ್ಬರಾಮನ್ ಅಭಿಪ್ರಾಯಪಟ್ಟರು.

ಬುಧವಾರ ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಪುರಾತತ್ವ ವಸ್ತುಗಳ ಸಂರಕ್ಷಣಾ ವಿಭಾಗದ ವತಿಯಿಂದ ಆಯೋಜಿಸಿದ್ದ ಪುರಾತತ್ವ ಸ್ಮಾರಕಗಳ ಸಂರಕ್ಷಣೆ ಕುರಿತ ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ವಿಶ್ವದ ಇತರ ರಾಷ್ಟ್ರಗಳಿಗಿಂತ ವಿಭಿನ್ನ ಹಾಗೂ ವಿಶಿಷ್ಟವಾದ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಜತೆಗೆ ಗತವೈಭವ ಸಾರುವ ಸ್ಮಾರಕಗಳನ್ನು ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡಿದೆ. ಸುಮಾರು 5000 ಅತ್ಯಂತ ಪ್ರಾಚೀನ ಸ್ಮಾರಕಗಳನ್ನು ಪುರಾತತ್ವ ಇಲಾಖೆಯಿಂದ ಸಂರಕ್ಷಣೆ ಮಾಡಲಾಗುತ್ತಿದ್ದು ಇವುಗಳ ಇತಿಹಾಸ, ಮಹತ್ವವನ್ನು ಯುವಕರಿಗೆ ತಿಳಿಸುವ ಮೂಲಕ ಐತಿಹಾಸಿಕ ಪ್ರಜ್ಞೆಯನ್ನು ಮೂಡಿಸಬೇಕಿದೆ ಎಂದು ಹೇಳಿದರು.

ಸ್ಮಾರಕಗಳು ವರುಷಗಳು ಉರುಳಿದಂತೆ ಆಂತರಿಕ ಹಾಗೂ ಬಾಹ್ಯ ಕಾರಣದಿಂದ ತನ್ನ ಸಮಸ್ಥಿತಿ ಕಳೆದುಕೊಳ್ಳುತ್ತವೆ. ಮೂಲ ಸ್ವರೂಪ ಕ್ಷೀಣಿಸಿ ವಿರೂಪವಾಗುತ್ತವೆ. ಅಂತಹ ಸ್ಥಿತಿಯಲ್ಲಿ ಅವುಗಳನ್ನು ಸಂರಕ್ಷಿಸಿ ಸಮಸ್ಥಿತಿಗೆ ಕೊಂಡೊಯ್ಯಬೇಕಾದ ಅಗತ್ಯತೆ ಇರುವುದರಿಂದ ಪುರಾತತ್ವ ಇಲಾಖೆ ಅಸ್ತಿತ್ವಕ್ಕೆ ಬಂದಿದೆ. ಸ್ಮಾರಕಗಳಲ್ಲಿ ವೈವಿಧ್ಯಮಯ ಭಿತ್ತಿ ಚಿತ್ರಗಳು, ಸುಂದರಲಾಕೃತಿಗಳು, ಇತಿಹಾಸ ಸಾರುವ ಕುರುಹುಗಳನ್ನು ರಚಿಸಲಾಗಿರುತ್ತದೆ. ಅವುಗಳ ಸ್ವರೂಪ ಹಾಗೂ ಆಕಾರ ಹಾಳಾಗದಂತೆ ಕಾಪಾಡಬೇಕಿದೆ. 1940ರ ನಂತರ ಸ್ಮಾರಕಗಳ ಸಂರಕ್ಷಣಾ ಕಾರ್ಯ ಮಹತ್ವ ಪಡೆದುಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಇದು ಕ್ಷೀಣಿಸುತ್ತಿದೆ. ಮತ್ತೆ ಸ್ಮಾರಕಗಳ ಸಂರಕ್ಷಣೆಗೆ ಜೀವತುಂಬಿ ಇತಿಹಾಸದ ಕುರುಹುಗಳನ್ನು ಉಳಿಸುವ ಮಹತ್ಕಾರ್ಯವಾಗಬೇಕಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ವಿಭಾಗದ ಮುಖ್ಯಸ್ಥೆ ಡಾ.ಶೋಭಾ, ಸಹಾಯಕ ಪ್ರಾಧ್ಯಾಪಕ ಡಾ.ಜಿ.ಕರಿಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: