ಮೈಸೂರು

ಹೆಚ್.ವಿಶ್ವನಾಥ್ ಗೆ ಹೈಕಮಾಂಡ್ ಬುಲಾವ್ : ದೆಹಲಿಗೆ ಹಠಾತ್ ಭೇಟಿ

ಕಾಂಗ್ರೆಸ್ ಹೈಕಮಾಂಡ್ ನ ಬುಲಾವ್ ಮೇರೆಗೆ ಮಾಜಿ ಸಂಸದ, ಕಾಂಗ್ರೆಸ್ ನ ಹಿರಿಯ ನಾಯಕ ಎಚ್. ವಿಶ್ವನಾಥ್ ದೆಹಲಿಗೆ ಹಠಾತ್ ಭೇಟಿ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ವಿಶ್ವನಾಥ್ ದೆಹಲಿ ಭೇಟಿಗೆ ಮಹತ್ವ ಬಂದಿದೆ. ಇತ್ತೀಚಿನ ದಿನಗಳಲ್ಲಿ ಜನಾರ್ದನ ಪೂಜಾರಿ, ಜಾಫರ್ ಷರೀಫ್, ವಿಶ್ವನಾಥ್ ಮುಂತಾದ ಹಿರಿಯ ನಾಯಕರು ಸಿದ್ದರಾಮಯ್ಯ ಸರಕಾರದ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸುತ್ತಿದ್ದು ಅವರ ಈ ಬಹಿರಂಗ ಟೀಕೆ ಗಳಿಂದ ಹೈಕಮಾಂಡ್ ಹೊಸ ತಲೆನೋವು ಎದುರಿಸುತ್ತಿದೆ. ಈ ನಾಯಕರ ಪಕ್ಷನಿಷ್ಠೆ ಯ ಬಗ್ಗೆ ಹೈಕಮಾಂಡ್ ಗೆ ಅಪಾರ ಗೌರವ ಇರುವುದರಿಂದಲೇ ಇವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ ಮನ ಒಲಿಸುವಂತೆ ಕೆಪಿಸಿಸಿ ಗೆ ಸೂಚನೆ ಬಂದಿದ್ದು, ಈಗ ಒಬ್ಬೊಬ್ಬರನ್ನೇ ಖುದ್ದಾಗಿ ದೆಹಲಿಗೆ ಕರೆಸಿ ಸಮಾಧಾನ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ಕಾರ್ಯವೈಖರಿ ಬಗ್ಗೆ ಸಿಎಂ ಇಬ್ರಾಹಿಂ ಅವರಿಗೂ ತೀವ್ರ ಅಸಮಾಧಾನ ಇದೆ. ಆದರೆ ಅವರು ಬಹಿರಂಗವಾಗಿ ಟೀಕೆಗಳನ್ನು ನಡೆಸುತ್ತಿಲ್ಲ. ಗುಟ್ಟಾಗಿ ದೇವೇಗೌಡರನ್ನು ಇತ್ತೀಚೆಗೆ ಭೇಟಿಯಾಗಿರುವ ಇಬ್ರಾಹಿಂ ಈಗಾಗಲೆ ಜೆಡಿ ಎಸ್ ನಲ್ಲಿ ಒಂದು ಕಾಲು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈಗ ಅಲ್ಲಿಯೇ ಇರಿ, ಅಧಿಕಾರ ಅನುಭವಿಸಿ, ಸೂಕ್ತ ಸಂದರ್ಭದಲ್ಲಿ ಜೆಡಿಎಸ್ ಗೆ ಕರೆದುಕೊಳ್ಳುವೆ ಎಂದು ದೇವೇಗೌಡರು ಅಭಯ ನೀಡಿದ್ದಾರೆ ಎನ್ನಲಾಗುತ್ತಿದೆ.

ಕೆಆರ್ ನಗರಕ್ಕೆ ಕಳೆದ ವಾರ ಚಿಕಿತ್ಸೆಯ ನೆಪದಲ್ಲಿ ತೆರಳಿದ ಸಿಎಂ ಇಬ್ರಾಹಿಂ, ವಿಶ್ವನಾಥ್ ಅವರನ್ನು ಭೇಟಿಯಾಗಿ ಜೆಡಿಎಸ್ ಸೇರ್ಪಡೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ ಕಾಂಗ್ರೆಸ್ ನ ಪ್ರಮುಖ ನಾಯಕ ಮಾಜಿ ಸಂಸದ  ಕೋದಂಡರಾಮಯ್ಯ ಅವರೂ ಜೆಡಿಎಸ್ ಸೇರ್ಪಡೆ ಬಗ್ಗೆ ದೇವೇಗೌಡರ ಜತೆಗೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಸ್ವಲ್ಪ ಸಮಯ ತಾಳಿರಿ ಎಂದು ಅವರಿಗೆ ದೇವೇಗೌಡರು ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ. ಉಪಚುನಾವಣೆಯ ಫಲಿತಾಂಶ ಏನೇ ಇದ್ದರೂ ಕಾಂಗ್ರೆಸ್ ಪಾಳೆಯವನ್ನು ಬಿಟ್ಟು ಜೆಡಿ ಎಸ್ ಗೆ ನೆಗೆಯುವವರ ಸಂಖ್ಯೆ ಹೆಚ್ಚಾಗುವುದು ಖಚಿತ. ಶಿವರಾಮೇಗೌಡ ಮತ್ತು ಸುರೇಶ್ ಗೌಡ ಅವರ ಸೇರ್ಪಡೆ ಆರಂಭ ಮಾತ್ರ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಂಬೈಯ ಖಾಸಗಿ ಸಂಸ್ಥೆಯೊಂದು ನಡೆಸಿರುವ ಮುಂಬರುವ ವಿಧಾನಸಬಾ ಚುನಾವಣೆಯ ಸಮೀಕ್ಷೆಯಲ್ಲಿ ಹಳೆ ಮೈಸೂರು ಪ್ರದೇಶದಲ್ಲಿ ಜೆಡಿಎಸ್ 50 ರಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವರದಿ ಸಿಕ್ಕಿದ್ದು ದೇವೇಗೌಡರ ಉತ್ಸಾಹವನ್ನು ಇಮ್ಮಡಿಸಿದೆ ಎನ್ನಲಾಗಿದೆ.
ದೆಹಲಿಗೆ ತೆರಳಿರುವ ವಿಶ್ವನಾಥ್ ಅವರು ರಾಜ್ಯದಲ್ಲಿ ಪಕ್ಷದ ದಯನೀಯ ಸ್ಥಿತಿಯ ಬಗ್ಗೆ ಹೈಕಮಾಂಡ್ ಗೆ ವಿವರ ನೀಡಲಿದ್ದು ಅಲ್ಲಿಂದ ಮರಳಿದ ಬಳಿಕ ನಿರ್ಧಾರವೊಂದನ್ನು ಕೈಗೊಳ್ಳುವ ಸಾಧ್ಯತೆ ಇದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: