
ದೇಶಪ್ರಮುಖ ಸುದ್ದಿ
ರಜಿನಿ ಪಕ್ಷದ ಭವಿಷ್ಯ ಶೀಘ್ರವೇ ಪ್ರಕಟಿಸುವೆ: ನಟ ರಜನಿಕಾಂತ್
ಚೆನ್ನೈ,ನ.30-ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ರಾಜಕೀಯ ಪಕ್ಷ ರಜಿನಿ ಮಕ್ಕಳ್ ಮಂದ್ರಂ ನ ಭವಿಷ್ಯದ ಕುರಿತಾದ ತೀರ್ಮಾನವನ್ನು ಶೀಘ್ರವೇ ಪ್ರಕಟಿಸುವೆ ಎಂದಿದ್ದಾರೆ.
ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಇಂದು ದಿಢೀರ್ ಪಕ್ಷದ ಸಭೆ ಕರೆದು ಪಕ್ಷದ ಕಾರ್ಯದರ್ಶಿಗಳ ಜತೆಗೆ ಮಾತುಕತೆ ನಡೆಸಿದರು. ಬಳಿಕ ಪೊಯೆಸ್ ಗಾರ್ಡನ್ನಲ್ಲಿರುವ ತಮ್ಮ ನಿವಾಸದ ಸಮೀಪ ಸುದ್ದಿಗಾರರ ಜೊತೆ ಮಾತನಾಡಿ ಈ ವಿಚಾರ ತಿಳಿಸಿದರು.
ಪಕ್ಷದ ಪದಾಧಿಕಾರಿಗಳ ಜತೆಗಿನ ಮಾತುಕತೆ ಫಲಪ್ರದವಾಗಿದೆ. ನಾನು ತೆಗೆದುಕೊಳ್ಳುವ ತೀರ್ಮಾನಕ್ಕೆ ಅವರೆಲ್ಲ ಬದ್ಧರಾಗಿರುವುದಾಗಿ ಭರವಸೆ ನೀಡಿದ್ದಾರೆ. ಅವರೆಲ್ಲರ ಚಿಂತನೆಗಳನ್ನು ಗಮನಿಸಿ ಶೀಘ್ರವೇ ಒಂದು ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಿದರು.
ತಮಿಳುನಾಡಿನಲ್ಲಿ 2021ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಕಳೆದ ತಿಂಗಳಷ್ಟೇ ರಜಿನಿಕಾಂತ್ ತಾವು 2016ರಲ್ಲಿ ಕಿಡ್ನಿ ಕಸಿ ಮಾಡಿಸಿದ ವಿಚಾರ ಬಹಿರಂಗಪಡಿಸಿದ್ದರು. ವೈದ್ಯರ ಸಲಹೆ ಮೇರೆಗೆ ರಾಜಕೀಯ ಚಟುವಟಿಕೆ ವಿಳಂಬ ಮಾಡಿದ್ದಾಗಿ ಹೇಳಿದ್ದರು. (ಏಜೆನ್ಸೀಸ್, ಎಂ.ಎನ್)