ಮೈಸೂರು

ದೆಹಲಿ ರೈತರ ಹೋರಾಟ ಬೆಂಬಲಿಸಿ, ಕಬ್ಬಿಗೆ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗದಿಪಡಿಸಲು ಒತ್ತಾಯಿಸಿ ಡಿ.8ರಂದು ಪ್ರತಿಭಟನೆ : ಕುರುಬೂರು ಶಾಂತಕುಮಾರ್

ಮೈಸೂರು,ಡಿ.2:- ದೆಹಲಿ ರೈತರ ಹೋರಾಟ ಬೆಂಬಲಿಸಿ, ಕಬ್ಬಿನ ಎಫ್ ಪಿಆರ್ ದರ ಅವೈಜ್ಞಾನಿಕ, ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗದಿಪಡಿಸಬೇಕು ಎಂದು ಬೆಂಗಳೂರು ವಿಧಾನಸೌಧದ ಎದುರು ಡಿ.8ರಂದು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಬೃಹತ್ ಪ್ರತಿಭಟನಾಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಜಲದರ್ಶಿನಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ರೈತ ವಿರೋಧಿ ಸುಗ್ರೀವಾಜ್ಞೆ ಕಾನೂನುಗಳ ವಿರುದ್ಧ ನಡೆಸುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ವಿಧಾನಸೌಧ ಎದುರು ಬೃಹತ್ ಪ್ರತಿಭಟನಾಧರಣಿ ನಡೆಸಲಾಗುವುದು. ಕೇಂದ್ರ ಸರ್ಕಾರ ರೈತರ ಚಳವಳಿಯನ್ನು ಹತ್ತಿಕ್ಕುವ , ದಿಕ್ಕುತಪ್ಪಿಸುವ ಕಾರ್ಯ ನಡೆಸಬಾರದು. ಜಾರಿ ಮಾಡಿರುವ ರೈತ ವಿರೋಧಿ ಕಾನೂನುಗಳನ್ನು ಪಾಪಸ್ ಪಡೆಯಬೇಕು ಎಂದು ತಿಳಿಸಿದರು.
2020-21ನೇ ಸಾಲಿನ ಕಬ್ಬಿನ ನ್ಯಾಯ ಸಮ್ಮತ ದರ ಅನ್ಯಾಯದ ದರವಾಗಿದೆ. ಕಬ್ಬು ಸಂಶೋಧನಾ ಸಂಸ್ಥೆಗಳು ಟನ್ ಕಬ್ಬು ಬೆಳೆಯಲು 3050ವೆಚ್ಚವಾಗುತ್ತದೆ ಎಂದು ವರದಿ ಕೊಟ್ಟಿದ್ದರೂ ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ಎಫ್ ಪಿಆರ್ ದರವನ್ನು ಶೇಖಡಾ 10ಇಳುವರಿಗೆ 2850ರೂ.ನಿಗದಿ ಮಾಡಿರುವುದು ರೈತರಿಗೆ ನಷ್ಟವಾಗುತ್ತಿದೆ. ಕಬ್ಬು ಕಟಾವು ಸಾಗಾಣಿಕೆ ಉತ್ಪಾದನೆ ವೆಚ್ಚ ಏರಿಕೆಯಾಗಿದೆ. ನಿಗದಿಮಾಡಿರುವ ಕಬ್ಬಿನ ದರವನ್ನು ಪುನರ್ ಪರಿಶೀಲಿಸಿ ಹೆಚ್ಚುವರಿಯಾಗಿ ನಿಗದಿ ಮಾಡಲು ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸುತ್ತಿವೆ ಎಂದು ಹಲವು ಕಾರ್ಖಾನೆಗಳಿಗೆ ನೋಟೀಸ್ ನೀಡಲಾಗಿದೆ. ಇದು ರಾಜ್ಯ ಸರ್ಕಾರಕ್ಕೆ ಗೊತ್ತಿರುವ ವಿಚಾರವೇ. ಈ ಕಾರಣ ಕಬ್ಬಿನ ಎಫ್ ಆರ್ ಪಿ ದರ ನಿಗದಿ ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿಗೆ ಕಡಿಮೆ ಆಗಿದೆ. ರಾಜ್ಯ ಸರ್ಕಾರಗಳಿಗೆ ಕಾನೂನಿನ ಅಧಿಕಾರ ಇದ್ದರೂ ರಾಜ್ಯದಲ್ಲಿ ಎಸ್ ಎಪಿ ಕಾಯ್ದೆ ಜಾರಿ ಬಂದ ಮೇಲೆ ಕಳೆದ ಮೂರು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ವ್ಯವಸ್ಥಿತಿ ರೀತಿಯಲ್ಲಿ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.
ರೈತರಿಗೆ ನ್ಯಾಯಯುತ ಹೆಚ್ಚಿನ ಬೆಲೆ ನಿಗದಿಪಡಿಸುವುದಾಗಿ ಸಕ್ಕರೆ ಸಚಿವರು ಕಬ್ಬು ಖರೀದಿ ಮಂಡಳಿ ಸಭೆಯಲ್ಲಿ ತಿಳಿಸಿದ್ದರು. ಇಲ್ಲಿ ತನಕ ಯಾವುದೇ ತೀರ್ಮಾನ ಪ್ರಕಟಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರೂ ಯಾವುದೇ ಕ್ರಮ ಜಾರಿಯಾಗಿಲ್ಲ. ಸರ್ಕಾರವನ್ನು ಎಚ್ಚರಿಸಲು ರಾಜ್ಯದ ಕಬ್ಬು ಬೆಳೆಗಾರರು ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನಾಧರಣಿ ನಡೆಸಿ ಸರ್ಕಾರಕ್ಕೆ ಒತ್ತಾಯ ಪತ್ರ ಸಲ್ಲಿಸಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದರು.
ಕಬ್ಬಿನ ಎಫ್ ಆರ್ ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಬೇಕು. ಈಗ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ರೈತರ ಉತ್ಪನ್ನಗಳಿಗೆ ಹೊಲದಲ್ಲಿ ದರ ನಿಗದಿಪಡಿಸಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಅದೇ ಪ್ರಕಾರ ಕಬ್ಬಿನ ದರವನ್ನು ನಿಗದಿಪಡಿಸಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅತ್ತಹಳ್ಳಿ ದೇವರಾಜು, ಗಳಗರ ಹುಂಡಿ ವೆಂಕಟೇಶ್, ಬರಡನಪುರ ನಾಗರಾಜು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: